ತ್ಯಾಜ್ಯ ನಿರ್ವಹಣೆಯಲ್ಲಿ ಪುತ್ತೂರು ಹತ್ತೂರಿಗೆ ಮಾದರಿಯಾಗಲಿ: ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರಿನಲ್ಲಿ ಸಿ.ಬಿ.ಜಿ ಘಟಕದ ಲೋಕಾರ್ಪಣೆ
ಪುತ್ತೂರು: ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಿ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ನಿರ್ಮಿಸಲಾದ ಸಿ.ಬಿ.ಜಿ (Compressed Bio Gas) ಘಟಕದ ಲೋಕಾರ್ಪಣೆ ಭಾನುವಾರ (ಮಾ.15) ಬೆಳಿಗ್ಗೆ 10.30ಕ್ಕೆ ಪುತ್ತೂರು ನಗರಸಭೆಯ ಸ್ವಚ್ಛ–ಬನ್ನೂರಿನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ನೆರವೇರಿತು.
ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಈ ಘಟಕವನ್ನು ನಿರ್ಮಿಸಲಾಗಿದೆ. ಸುಮಾರು 12 ವರ್ಷಗಳ ಸತತ ಪರಿಶ್ರಮ ಈ ಘಟಕದ ಸ್ಥಾಪನೆಯ ಹಿಂದಿದೆ. ಕಸ ಮತ್ತು ಚಿನ್ನ ಎರಡೂ ತದ್ವಿರುದ್ಧ ಎಂದು ನಾವು ಭಾವಿಸಿದರೆ, ಚಿನ್ನದ ಉದ್ಯಮದಲ್ಲಿರುವ ಕೃಷ್ಣನಾರಾಯಣ ಮುಳಿಯ ಅವರು ತಮ್ಮ ಸಂಸ್ಥೆಯ ಮೂಲಕ ತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಿಸಲು ಹೊರಟಿದ್ದು ನಿಜಕ್ಕೂ ಸಾಹಸದ ಕಾರ್ಯವೇ ಸರಿ. ಇದಕ್ಕೆ ಅನುಮತಿ ಪಡೆಯುವಲ್ಲಿಂದ ತೊಡಗಿ, ನಾನಾ ಹಂತದ ಪ್ರಮಾಣ ಪತ್ರಗಳನ್ನು ಪಡೆಯಲು ಬಹಳಷ್ಟು ಶ್ರಮ ಹಾಕಿದ್ದಾರೆ. ಕಸದಿಂದ ರಸ ಎಂಬ ಮಾತಿನಂತೆ ತ್ಯಾಜ್ಯದಿಂದ ಸಿಬಿಜಿ ಅನಿಲ ಇಂಧನ ಉತ್ಪಾದಿಸುವ ಘಟಕ ಆರಂಭಿಸಿದ್ದು ಸಣ್ಣ ಸಾಧನೆಯಲ್ಲ ಎಂದು ಶಾಸಕರು ಶ್ಲಾಘಿಸಿದರು.
ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಕೃಷ್ಣಮುಳಿಯ ಗ್ರೀನ್ ಎನರ್ಜಿ ಎಲ್.ಎಲ್.ಪಿ ಮುಖ್ಯಸ್ಥರಾದ ಕೃಷ್ಣನಾರಾಯಣ ಮುಳಿಯ ಅವರು, ಈ ಘಟಕದ ಯೋಚನೆಯ ಹಂತದಿಂದ ಉದ್ಘಾಟನೆಯ ಹಂತದ ವರೆಗೆ ಕ್ರಮಿಸಿದ ಕಠಿಣ ಹಾದಿಯನ್ನು ವಿವರಿಸಿದರು. ನಾನಾ ತೊಡಕುಗಳು ಎದುರಾದರೂ ಹಿಡಿದ ಕೆಲಸವನ್ನು ಬಿದೆ ಕೊನೆ ಮುಟ್ಟಿಸುವ ಛಲದಿಂದ ತಾವು ಹಾಗೂ ತಮ್ಮ ಜತೆ ಸಹಕರಿಸಿ ಎಲ್ಲ ತಂಡಗಳು ಶ್ರಮಿಸಿರುವುದನ್ನು ನೆನಪಿಸಿಕೊಂಡರು.
ಕೃಷ್ಣಮುಳಿಯ ಗ್ರೀನ್ ಎನರ್ಜಿ ಎಲ್.ಎಲ್.ಪಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್, ಸ್ವಚ್ಛ ಭಾರತ್ ಚಾರಿಟೇಬಲ್ ಟ್ರಸ್ಟ್ ಮತ್ತು ರಿಟ್ಯಾಪ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಇವರ ಸಾರಥ್ಯದಲ್ಲಿ, ಪುತ್ತೂರು ನಗರಸಭೆಯ ಸಹಯೋಗದೊಂದಿಗೆ ಈ ಯೋಜನೆ ಅನುಷ್ಠಾನಗೊಂಡಿದೆ.
ಸಮಾರಂಭವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ದೀಪ ಬೆಳಗಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣಮುಳಿಯ ಗ್ರೀನ್ ಎನರ್ಜಿ ಎಲ್.ಎಲ್.ಪಿ. ವ್ಯವಸ್ಥಾಪಕ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ವಹಿಸಿದ್ದರು.
ಮುಖ್ಯ ಅತಿಥಿಗಳು:
- ಕಿಶೋರ್ ಕುಮಾರ್ ಬೊಟ್ಯಾಡಿ (MLC)
- ಸ್ಟೆಲ್ಲಾ ವರ್ಗೀಸ್ (ACP, ಪುತ್ತೂರು)
- ವಿದ್ಯಾ ಕಾಳೆ (ಪೌರಾಯುಕ್ತೆ)
ಗೌರವ ಉಪಸ್ಥಿತಿ:
- ಲೀಲಾವತಿ ಅಣ್ಣು ನಾಯ್ಕ್
- ಎಚ್.ಆರ್. ಕೇಶವ (Rotary)
- ಡಾ. ದಿವ್ಯ ಪ್ರಶಾಂತ್
- ರೊ. ಶಶಿಧರ್ ಕಿನ್ನಿಮಜಲು
ಘಟಕದ ಪ್ರಯೋಜನಗಳು:
ನಗರದಲ್ಲಿ ಸಂಗ್ರಹವಾಗುವ ಸಾವಯವ ತ್ಯಾಜ್ಯವನ್ನು ಈ ಸಿ.ಬಿ.ಜಿ ಘಟಕದ ಮೂಲಕ ಸಂಸ್ಕರಿಸಿ ಬಯೋ ಗ್ಯಾಸನ್ನು ಉತ್ಪಾದಿಸಲಾಗುತ್ತದೆ. ಇದರಿಂದ ತ್ಯಾಜ್ಯ ನಿರ್ವಹಣೆ ಸುಧಾರಣೆ, ಪರಿಸರ ಮಾಲಿನ್ಯ ಕಡಿತ, ಕಾರ್ಬನ್ ಡೈಆಕ್ಸೈಡ್ ವಿಸರ್ಜನೆಯ ತಗ್ಗುವಿಕೆ ಸೇರಿದಂತೆ ಹಲವಾರು ಪ್ರಯೋಜನಗಳು ಲಭ್ಯವಾಗಲಿವೆ. ಅಲ್ಲದೆ ಉತ್ಪಾದನೆಯಾಗುವ ಗ್ಯಾಸನ್ನು ವಾಹನಗಳಿಗೆ ಇಂಧನವಾಗಿ ಬಳಸುವ ಸಾಧ್ಯತೆ ಕೂಡ ಇದೆ.

