ಕೃಷಿ ಉದ್ಯಮದ ದಿಗ್ಗಜ, ಕ್ರಾಂತಿಕಾರಿ ರೈತ ನಾಯಕ: ಪ್ರದೀಪ್ ಪೂವಯ್ಯ ತೇಲಪಂಡ ಅವರ ಯಶೋಗಾಥೆ

🌐 Select Language / ಭಾಷೆಯನ್ನು ಆಯ್ಕೆಮಾಡಿ:
🏆 ಯಶೋಗಾಥೆ (Success Story)

ಕೃಷಿ ಉದ್ಯಮದ ದಿಗ್ಗಜ, ಕ್ರಾಂತಿಕಾರಿ ರೈತ ನಾಯಕ: ಪ್ರದೀಪ್ ಪೂವಯ್ಯ ತೇಲಪಂಡ ಅವರ ಯಶೋಗಾಥೆ

ಕೊಡಗಿನ ಮಣ್ಣಿನ ಹೆಮ್ಮೆಯ ಪುತ್ರ, ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕೃಷಿ ಕೀರ್ತಿ ಪತಾಕೆ ಹಾರಿಸಿದ ಸಾಧಕನ ಸ್ಫೂರ್ತಿದಾಯಕ ಯಶೋಗಾಥೆ.

ಪ್ರದೀಪ್ ಪೂವಯ್ಯ ತೇಲಪಂಡ ಅವರ ಭಾವಚಿತ್ರ

ಕೊಡಗು ಎಂದರೆ ಕೇವಲ ಪ್ರಕೃತಿ ಸೌಂದರ್ಯದ ನಾಡಲ್ಲ, ಅದು ಹೋರಾಟಗಾರರ ಹಾಗೂ ಕಠಿಣ ಪರಿಶ್ರಮಿಗಳ ನೆಲೆವೀಡು. ಅಂತಹ ಕೀರ್ತಿವಂತ ಮಣ್ಣಿನಲ್ಲಿ ಜನಿಸಿ, ಇಂದು ಕೃಷಿ ಆರ್ಥಿಕತೆ, ತಾಂತ್ರಿಕ ಕೃಷಿ ಹಾಗೂ ರಫ್ತು ಉದ್ಯಮದಲ್ಲಿ ಅಂತರರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ವ್ಯಕ್ತಿತ್ವ ಪ್ರದೀಪ್ ಪೂವಯ್ಯ ತೇಲಪಂಡ. ಕಾರುಕುಂದ ಗ್ರಾಮದ ಹೆಮ್ಮೆಯ ಕಾಫಿ ಬೆಳೆಗಾರರಾದ ಇವರು, ಕೇವಲ ಒಬ್ಬ ಉದ್ಯಮಿಯಾಗಿ ಉಳಿಯದೆ ಸಾವಿರಾರು ಸಣ್ಣ ಮತ್ತು ಅತಿ ಸಣ್ಣ ರೈತರ ಬದುಕಿಗೆ ಆಸರೆಯಾಗಿದ್ದಾರೆ.

📚 ಬಾಲ್ಯ ಮತ್ತು ಶಿಕ್ಷಣದ ದಿನಗಳು

ಪ್ರದೀಪ್ ಪೂವಯ್ಯ ಅವರ ಪ್ರಾಥಮಿಕ ಶಿಕ್ಷಣವು ಮಡಿಕೇರಿಯ ಪ್ರಸಿದ್ಧ ಕಾನ್ವೆಂಟ್ ಶಾಲೆಯಲ್ಲಿ (1 ರಿಂದ 7ನೇ ತರಗತಿ) ನಡೆಯಿತು. ನಂತರ ತಮ್ಮ ಪ್ರೌಢಶಾಲೆ ಹಾಗೂ ಪದವಿ (ಬಿ.ಕಾಂ) ಶಿಕ್ಷಣವನ್ನು ಬೆಂಗಳೂರಿನ ಪ್ರತಿಷ್ಠಿತ ಸೇಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ಪೂರೈಸಿದರು. ಶಿಕ್ಷಣದ ನಂತರ ಮರಳಿ ಮಣ್ಣಿನ ಕಡೆಗೆ ಮುಖ ಮಾಡಿದ ಇವರು, ಕೆಲವು ವರ್ಷಗಳ ಕಾಲ ಕೃಷಿಕನಾಗಿ ತಮ್ಮದೇ ಕಾಫಿ ತೋಟದಲ್ಲಿ ಪ್ರಾಯೋಗಿಕ ಕಾರ್ಯನಿರ್ವಹಣೆಯ ಅನುಭವ ಪಡೆದರು.

💼 ಟಾಟಾ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆ ಮತ್ತು ಅನುಭವ

Search Kodagu Updates
Official

ಸರ್ಚ್ ಕೊಡಗು ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಕೃಷಿಯ ಪ್ರಾಯೋಗಿಕ ಜ್ಞಾನದ ಬೆನ್ನಲ್ಲೇ, ಇವರು ಕಾರ್ಪೊರೇಟ್ ಕೃಷಿ ರಂಗಕ್ಕೆ ಕಾಲಿಟ್ಟರು. ದೇಶದ ಹೆಮ್ಮೆಯ ಟಾಟಾ ಕಂಪನಿಯಲ್ಲಿ ಸುಮಾರು 12 ವರ್ಷಗಳ ಕಾಲ ಕೇರಳದ ಮೂನಾರ್ ಹಾಗೂ ತಮಿಳುನಾಡಿನ ಕಾಫಿ ಮತ್ತು ಟೀ ತೋಟಗಳಲ್ಲಿ ಮ್ಯಾನೇಜರ್ ಆಗಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ಪಡೆದ ತಾಂತ್ರಿಕ ಕೃಷಿ ಜ್ಞಾನ ಮತ್ತು ಎಸ್ಟೇಟ್ ನಿರ್ವಹಣೆಯು ಇವರ ಮುಂದಿನ ಉದ್ಯಮ ಹಾಗೂ ಕೃಷಿ ಕ್ರಾಂತಿಗೆ ಭದ್ರ ಬುನಾದಿ ಹಾಕಿತು.

🏢 ಬ್ಲೋಸ್ ಶವರ್ಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ (Blos Showers Agro Pvt Ltd)

Blos Showers Agro Logo

ಟಾಟಾ ಕಂಪನಿಯ ಸುದೀರ್ಘ ಅನುಭವದ ನಂತರ ಪ್ರದೀಪ್ ಪೂವಯ್ಯ ಅವರು ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು. ಕಳೆದೆರಡು ದಶಕಗಳಿಗೂ ಹೆಚ್ಚು ಕಾಲದಿಂದ (ಸುಮಾರು 30 ವರ್ಷಗಳು) ಇವರು Blos Showers Agro Pvt Ltd ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

Blos Showers Agro Facility

🍲 ಪ್ರೋಸೆಸಿಂಗ್ ಫುಡ್ಸ್ ಮತ್ತು ಜಾಗತಿಕ ಮಾರುಕಟ್ಟೆ

ಇವರ ಸಂಸ್ಥೆಯು ಮುಖ್ಯವಾಗಿ ಸಣ್ಣ ಮಿಡಿ ಸೌತೆಕಾಯಿ (Gherkins), ಬೇಬಿ ಕಾರ್ನ್ (Baby Corn), ಕೆಂಪು ಮತ್ತು ಹಳದಿ ಕ್ಯಾಪ್ಸಿಕಂ (Red & Yellow Capsicum) ಹಾಗೂ ಜಲಪೆನೋ (Jalapeño) ತರಕಾರಿಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಫುಡ್ ಪ್ರೋಸೆಸ್ (ಆಹಾರ ಸಂಸ್ಕರಣೆ) ಮಾಡಿ ವಿದೇಶಗಳಿಗೆ ರಫ್ತು ಮಾಡುತ್ತಿದೆ. ಟಿನ್ ಕೇನ್‌ಗಳಲ್ಲಿ (Tin Cans) ಸುರಕ್ಷಿತವಾಗಿ ಪ್ಯಾಕೇಜ್ ಮಾಡಿ ಇವುಗಳನ್ನು ಡೊಮೆಸ್ಟಿಕ್ (ದೇಶೀಯ) ಮಾರುಕಟ್ಟೆಯಲ್ಲೂ ಮಾರಾಟ ಮಾಡಲಾಗುತ್ತದೆ.

📦 ನಮ್ಮ ಪ್ರಮುಖ ಸಂಸ್ಕರಿತ ಆಹಾರ ಉತ್ಪನ್ನಗಳು:

Gherkins Processing Gherkins & Vegetables
Baby Corn Pack Baby Corn
Green Chilli Processing Green Peppers & Chillies

🌍 ಜಾಗತಿಕ ಮಾರುಕಟ್ಟೆಯ ಪಾಲು:

ಭಾರತದಲ್ಲಿ ಬೆಳೆಯುವ ಈ ಸಂಸ್ಕರಿತ ಆಹಾರದಲ್ಲಿ ಕೇವಲ 3% ಮಾತ್ರ ದೇಶೀಯವಾಗಿ ಬಳಕೆಯಾಗುತ್ತದೆ. ಉಳಿದಂತೆ ಇವರ ಸಂಸ್ಥೆಯು ಕಳೆದ 30 ವರ್ಷಗಳಿಂದ ಅಮೆರಿಕ, ಯುರೋಪ್, ರಷ್ಯಾ ಮತ್ತು ಮಿಡಲ್ ಈಸ್ಟ್ (ಮಧ್ಯಪ್ರಾಚ್ಯ) ದೇಶಗಳಿಗೆ ಭಾರಿ ಪ್ರಮಾಣದಲ್ಲಿ ರಫ್ತು ಮಾಡುತ್ತಿದೆ. ಒಟ್ಟಾರೆಯಾಗಿ ಭಾರತದ ಈ ರಫ್ತು ಮಾರುಕಟ್ಟೆಯಲ್ಲಿ ಫುಡ್ ಪ್ರೋಸೆಸ್ಸಿಂಗ್ ಇಂಡಸ್ಟ್ರಿಯ ಪಾಲು ಸುಮಾರು 3,000 ಕೋಟಿ ರೂಪಾಯಿಗಳಷ್ಟಿದ್ದು, ಇದೊಂದು ಬೃಹತ್ ಮಾರುಕಟ್ಟೆಯಾಗಿದೆ.

ಸಂಸ್ಥೆಯ ಅಧಿಕೃತ ಮಾಹಿತಿಯ ಪ್ರಕಾರ, ಬ್ಲೋಸ್ ಶವರ್ಸ್ ಆಗ್ರೋ ಉತ್ಪನ್ನಗಳು ಕೇವಲ ಇಷ್ಟಕ್ಕೇ ಸೀಮಿತವಾಗಿಲ್ಲ. ಇವರ ಸಂಸ್ಕರಿತ ಆಹಾರಗಳು ಜಗತ್ತಿನಾದ್ಯಂತ ಹರಡಿದ್ದು, ಯುಎಸ್ಎ (USA), ಚಿಲಿ (ದಕ್ಷಿಣ ಅಮೆರಿಕ), ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಚೀನಾ, ಯುಕ್ರೇನ್, ದಕ್ಷಿಣ ಆಫ್ರಿಕಾ, ಉತ್ತರ ಆಫ್ರಿಕಾ, ಈಜಿಪ್ಟ್, ಮೊರಾಕೊ, ಆಲ್ಜೀರಿಯಾ ಹಾಗೂ ಟ್ಯುನಿಷಿಯಾ ದೇಶಗಳ ಆಹಾರ ಪ್ರೇಮಿಗಳ ಪ್ಲೇಟ್‌ಗಳನ್ನು ಅಲಂಕರಿಸುತ್ತಿವೆ. ಪ್ರಸ್ತುತ ಈ ಸಂಸ್ಥೆಯು ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕವನ್ನು ಹೊಂದಿದೆ.

🌾 ಕಾಂಟ್ರಾಕ್ಟ್‌ ಫಾರ್ಮಿಂಗ್‌ (ಒಪ್ಪಂದ ಕೃಷಿ) ನ ನೈಜ ಮತ್ತು ಆಳವಾದ ವಿವರಗಳು

ಇವರ ಉದ್ಯಮದ ಯಶಸ್ಸಿನ ನಿಜವಾದ ಶಕ್ತಿ ಇರುವುದು ಕೃಷಿಕರಲ್ಲಿ. ಮೊದಲು ಇವರು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿ, ಕಾಂಟ್ರಾಕ್ಟ್‌ ಫಾರ್ಮಿಂಗ್‌ (ಒಪ್ಪಂದ ಕೃಷಿ) ಮುಖಾಂತರ ಅವರಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಗೊಬ್ಬರ, ಔಷಧಿ ಹಾಗೂ ಬೀಜಗಳನ್ನು ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ನೀಡುತ್ತಾರೆ. ನಂತರ ರೈತರು ಬೆಳೆಸಿದ ಫಸಲನ್ನು ತಾವೇ ನೇರವಾಗಿ ಉತ್ತಮ ಬೆಲೆಗೆ ಖರೀದಿಸುತ್ತಾರೆ.

Contract Farming
👨‍🌾

ಆದಾಯದ ಭರವಸೆ

ಪ್ರಸ್ತುತ 3,000ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ (ವೆಬ್‌ಸೈಟ್ ಅಧಿಕೃತ ಅಂಕಿ-ಅಂಶದ ಪ್ರಕಾರ 5,000ಕ್ಕೂ ಹೆಚ್ಚು ಕೃಷಿಕ ಕುಟುಂಬಗಳು ಮತ್ತು ಸುಮಾರು 20,000 ಗ್ರಾಮೀಣ ಜನರಿಗೆ) ನಿರಂತರ ಆದಾಯದ ಮೂಲ ಸಿಕ್ಕಿದೆ.

📈

ಆರ್ಥಿಕ ಪ್ರಗತಿ

2 ರಿಂದ 5 ಎಕರೆ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಇದು ಅತ್ಯುತ್ತಮ ಆರ್ಥಿಕ ಆಧಾರವಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರೋಸೆಸ್ಡ್ ಫುಡ್ ಇಂಡಸ್ಟ್ರಿಗೆ ಮತ್ತು ಗರ್ಕಿನ್ಸ್ ಬೆಳೆಗೆ ಜಾಗತಿಕವಾಗಿ ತುಂಬಾ ದೊಡ್ಡ ಬೇಡಿಕೆ ಇದೆ.

📍 ಕಾಂಟ್ರಾಕ್ಟ್‌ ಫಾರ್ಮಿಂಗ್‌ನ ಹಬ್ ಮತ್ತು ಸ್ರೋಕ್ ಮಾಡೆಲ್ (Hub-Spoke Model):

ಬ್ಲೋಸ್ ಶವರ್ಸ್ ಆಗ್ರೋ ತನ್ನ ಒಪ್ಪಂದ ಕೃಷಿಯನ್ನು ಅತ್ಯಂತ ವ್ಯವಸ್ಥಿತವಾದ 'ಹಬ್ ಮತ್ತು ಸ್ಪೋಕ್' ಮಾದರಿಯಲ್ಲಿ ನಿರ್ವಹಿಸುತ್ತದೆ. ಇದು ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶ ಎಂಬ 4 ದಕ್ಷಿಣ ಭಾರತದ ರಾಜ್ಯಗಳಲ್ಲಿ ಸುಮಾರು 3,000 ಎಕರೆಗೂ ಹೆಚ್ಚು ಕೃಷಿ ಭೂಮಿಯಲ್ಲಿ ವಿಸ್ತರಿಸಿದೆ.

  • ವಿಜ್ಞಾನ ಆಧಾರಿತ ಕೃಷಿ: ಕೃಷಿ ವಿಜ್ಞಾನಿಗಳ ಕಟ್ಟುನಿಟ್ಟಾದ ಉಸ್ತುವಾರಿಯಲ್ಲಿ ಅಮೆರಿಕದ USFDA ಹಾಗೂ ಯುರೋಪಿಯನ್ ಯೂನಿಯನ್ (EU) ಜಾಗತಿಕ ನಿಯಮಾವಳಿಗಳಿಗೆ ಅನುಗುಣವಾಗಿ ಮಾತ್ರ ಕೀಟನಾಶಕ ಮತ್ತು ಗೊಬ್ಬರಗಳ ಬಳಕೆಯ 'ಪ್ಯಾಕೇಜ್ ಆಫ್ ಪ್ರ್ಯಾಕ್ಟಿಸಸ್' ಅನ್ನು ರೈತರು ಪಾಲಿಸುವಂತೆ ನೋಡಿಕೊಳ್ಳಲಾಗುತ್ತದೆ.
  • ಡ್ರೋನ್ ತಂತ್ರಜ್ಞಾನ (Drone Technology): ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಇವರು, ಡ್ರೋನ್‌ಗಳ ಮೂಲಕ ನಿಖರವಾದ ಫೀಲ್ಡ್ ಮ್ಯಾಪಿಂಗ್ ಮತ್ತು ಬೆಳೆಗಳ ತಪಾಸಣೆ ಮಾಡುತ್ತಾರೆ. ಇದರಿಂದ ತೋಟದ ಏರಿಳಿತಗಳು, ನೀರಿನ ಸಮರ್ಪಕ ನಿರ್ವಹಣೆ ಹಾಗೂ ರೋಗಗಳ ಪತ್ತೆ ಹಚ್ಚುವುದು ಸುಲಭವಾಗುತ್ತದೆ.
  • ವಿಶಾಲವಾದ ಮೂಲಸೌಕರ್ಯ: ಸಂಸ್ಥೆಯು 1,75,000 ಚದರ ಅಡಿಯ ಬೃಹತ್ ಸ್ಟೋರೇಜ್ ಸೌಲಭ್ಯವನ್ನು ಹೊಂದಿದ್ದು, ಇದು ಒಂದೇ ಬಾರಿಗೆ 3,000 ಮೆಟ್ರಿಕ್ ಟನ್‌ನಷ್ಟು ಸಂಸ್ಕರಿತ ಸರಕುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿದೆ. ಗ್ಲೋಬಲ್ ಕ್ವಾಲಿಟಿ ಸ್ಟ್ಯಾಂಡರ್ಡ್ಸ್ ಆದ FSSC 22000 ಮತ್ತು ಕೋಶರ್ (Kosher) ಪ್ರಮಾಣಪತ್ರಗಳನ್ನು ಈ ಘಟಕ ಹೊಂದಿದೆ.

ಇವರ ಈ ಅದ್ಭುತ ಸಾಧನೆ ಮತ್ತು ನಾಯಕತ್ವವನ್ನು ಗುರುತಿಸಿ, ಇವರನ್ನು ಇಂಡಿಯನ್ ಗರ್ಕಿನ್ಸ್ ಎಕ್ಸ್‌ಪೋರ್ಟರ್ಸ್ ಅಸೋಸಿಯೇಷನ್ (Indian Gherkins Exporters Association - IGEA) ನ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಕಳೆದ 5 ವರ್ಷಗಳಿಂದ ಇವರು ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. IGEA ಸಂಸ್ಥೆಯು ಭಾರತದ ಗರ್ಕಿನ್ಸ್ ರಫ್ತುದಾರರ ಹಿತರಕ್ಷಣೆ ಮಾಡುವ ಅತ್ಯುನ್ನತ ಸಂಸ್ಥೆಯಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಹೆಸರನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಇಂತಹ ಅಸೋಸಿಯೇಷನ್‌ಗಳಲ್ಲಿ ಸಣ್ಣ ರೈತರು ಸದಸ್ಯರಾದರೆ ತುಂಬಾ ಲಾಭವಿದೆ. ಮುಂಬರುವ ದಿನಗಳಲ್ಲಿ ವಿದೇಶಿ ಕಂಪನಿಗಳಿಂದ ಬರುವ ಜಾಗತಿಕ ಪೈಪೋಟಿಯನ್ನು (Competition) ಎದುರಿಸಲು ಮತ್ತು ಮಾರುಕಟ್ಟೆಯ ಏರಿಳಿತಗಳಿಗೆ ಹೊಂದಿಕೊಳ್ಳಲು ಇಂತಹ ಸಂಘಟನೆಗಳು ಸಣ್ಣ ರೈತರಿಗೆ ರಕ್ಷಣಾ ಕವಚವಾಗಲಿವೆ ಎಂದು ಇವರು ಸಲಹೆ ನೀಡುತ್ತಾರೆ.

🌶️ ಕಾಳುಮೆಣಸು (Black Pepper) ಆಮದು ತಡೆ ಮತ್ತು ಐತಿಹಾಸಿಕ ಹೋರಾಟ

Black Pepper

2018ರಲ್ಲಿ ಕೊಡಗಿನ ಇತಿಹಾಸದಲ್ಲಿ ಒಂದು ದೊಡ್ಡ ಕೃಷಿ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಹೊರದೇಶಗಳಿಂದ (ಮುಖ್ಯವಾಗಿ ವಿಯೆಟ್ನಾಂ ಮುಂತಾದ ದೇಶಗಳಿಂದ) ಕಡಿಮೆ ದರಕ್ಕೆ ಕಳಪೆ ಗುಣಮಟ್ಟದ ಕಾಳುಮೆಣಸನ್ನು ಇಂಪೋರ್ಟ್ (ಆಮದು) ಮಾಡಿ ಗೋಣಿಕೊಪ್ಪದಲ್ಲಿ ಜಮಾಯಿಸಿದಾಗ, ಸ್ಥಳೀಯ ಕೃಷಿಕರು ಪ್ರತಿಭಟನೆ ಮಾಡಿದರು. ಹೊರದೇಶದ ಕಡಮೆ ಬೆಲೆಯ ಕಾಳುಮೆಣಸಿನಿಂದಾಗಿ ನಮ್ಮ ದೇಶದ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಕಾಂಪಿಟಿಷನ್ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಈ ಘಟನೆ ನಡೆದಾಗ ಪ್ರದೀಪ್ ಪೂವಯ್ಯ ಅವರು ಸ್ವತಃ ಇದರ ಹಿಂದೆ ಇನ್ವೆಸ್ಟಿಗೇಷನ್ ಮತ್ತು ರಿಸರ್ಚ್ (ಸಂಶೋಧನೆ) ಪ್ರಾರಂಭಿಸಿದರು. ಇದು ಕೇವಲ ಕೊಡಗಿಗೆ ಸೀಮಿತವಾದ ಸಮಸ್ಯೆಯಲ್ಲ, ಇಡೀ ದೇಶದ ರೈತರ ಬೆನ್ನೆಲುಬು ಮುರಿಯುವ ಗಂಭೀರ ಸಮಸ್ಯೆ ಎಂಬುದನ್ನು ಅವರು ಮನಗಂಡರು. ಇಡೀ ದೇಶದ ಇಂಪೋರ್ಟ್-ಎಕ್ಸ್‌ಪೋರ್ಟ್ ಡೇಟಾವನ್ನು ಸಂಗ್ರಹಿಸಿ ರಿಸರ್ಚ್ ಮಾಡಿದಾಗ, ಕಾಯ್ದೆಯ ಲೋಪದೋಷಗಳು ಹಾಗೂ ಸರ್ಕಾರಕ್ಕೆ ಈ ಸೂಕ್ಷ್ಮ ವಿಷಯಗಳ ಬಗ್ಗೆ ಇದ್ದ ಮಾಹಿತಿಯ ಕೊರತೆಯೇ ಮುಖ್ಯ ಕಾರಣ ಎಂದು ಅವರಿಗೆ ತಿಳಿಯಿತು.

ಕೃಷಿ ಉದ್ಯಮದ ದಿಗ್ಗಜ, ಕ್ರಾಂತಿಕಾರಿ ರೈತ ನಾಯಕ: ಪ್ರದೀಪ್ ಪೂವಯ್ಯ ತೇಲಪಂಡ ಅವರ ಯಶೋಗಾಥೆ

🏛️ ದೆಹಲಿ ನಿಯೋಗ ಮತ್ತು ಐತಿಹಾಸಿಕ ಜಯ

ತಮ್ಮ ಸಂಶೋಧನಾ ವರದಿಯೊಂದಿಗೆ ಕೊಡಗಿನ ಪ್ರಮುಖ ಬೆಳೆಗಾರರ ಸಂಘಟನೆಯಾದ ಸಿಪಿಎ (CPA - Coorg Planters' Association) ಜೊತೆಗೂಡಿ, ದಕ್ಷಿಣ ಭಾರತದ 14 ಕೃಷಿ ಕ್ಷೇತ್ರಗಳ ಸಂಘಟನೆಗಳನ್ನು ಒಗ್ಗೂಡಿಸಿದರು. ಪ್ರಸಿದ್ಧ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ (CAMPCO) ಮತ್ತು ಅರೆಕಾ ಕೋ-ಆಪರೇಟಿವ್ ಸಂಸ್ಥೆಗಳೊಂದಿಗೆ ಚರ್ಚಿಸಿ ದೊಡ್ಡ ಒಕ್ಕೂಟ ರಚಿಸಿದರು. ಕ್ಯಾಂಪ್ಕೋ ಸಂಸ್ಥೆಯ ಅಂದಿನ ಅಧ್ಯಕ್ಷರಾಗಿದ್ದ ಕಂಕೋಡಿ ಪದ್ಮನಾಭ ಅವರ ನೇತೃತ್ವದಲ್ಲಿ ಇವರ ತಂಡ ದೆಹಲಿಗೆ ನಿಯೋಗ ತೆರಳಿತು.

ಸ್ಥಳೀಯ ಸಂಸದರಾದ ರಾಜ್‌ಕುಮಾರ್, ನಳಿನ್ ಕುಮಾರ್ ಕಟೀಲು ಮತ್ತು ಶೋಭಾ ಕರಂದ್ಲಾಜೆ ಅವರ ಸಹಕಾರದೊಂದಿಗೆ ಅಂದಿನ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ, ಇಂಪೋರ್ಟ್ ದುರುಪಯೋಗವನ್ನು ತಡೆಗಟ್ಟಲು ಬೇಕಾದ ಎಲ್ಲಾ ರಿಸರ್ಚ್ ಪೇಪರ್‌ಗಳು ಮತ್ತು ಸಾಕ್ಷ್ಯಗಳನ್ನು ನೀಡಲಾಗಿ ಸಚಿವರಿಗೆ ಪರಿಸ್ಥಿತಿಯ ಗಂಭೀರತೆಯ ಮನವರಿಕೆಯಾಯಿತು.

ಇದರ ಫಲವಾಗಿ ಕೇವಲ 10 ದಿನಗಳಲ್ಲಿ ಕೇಂದ್ರ ಸರ್ಕಾರ ಕಾನೂನು ಕ್ರಮ ಕೈಗೊಂಡು, ಭಾರತಕ್ಕೆ ಹೊರದೇಶದಿಂದ ಕಾಳುಮೆಣಸನ್ನು ಆಮದು ಮಾಡಿಕೊಳ್ಳಬೇಕಾದರೆ ಕನಿಷ್ಠ ಆಮದು ಬೆಲೆ (Minimum Import Price - MIP) ಪ್ರತಿ ಕೆಜಿಗೆ 500 ರೂಪಾಯಿಗಳಿಗಿಂತ (ಮಾಹಿತಿಯಲ್ಲಿ ಉಲ್ಲೇಖಿಸಿರುವಂತೆ ಕನಿಷ್ಠ ರೂ. 200 ರ ಕಟ್ಟುನಿಟ್ಟಿನ ನಿಯಮಗಳ ಮಿತಿ) ಕಡಿಮೆ ಇರಬಾರದು ಎಂದು ಐತಿಹಾಸಿಕ ಆದೇಶ ಹೊರಡಿಸಿತು.

🔍 ನಿರಂತರ ಮಾನಿಟರಿಂಗ್ ಮತ್ತು ಕಾವಲು

ಈ ಯಶಸ್ಸಿನ ನಂತರವೂ ಪ್ರದೀಪ್ ಪೂವಯ್ಯ ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅಂದಿನಿಂದ ಇಂದಿನವರೆಗೂ ಪ್ರತಿ ತಿಂಗಳು ದೇಶದ ಇಂಪೋರ್ಟ್ ಡೇಟಾವನ್ನು ಕಟ್ಟುನಿಟ್ಟಾಗಿ ಮಾನಿಟರಿಂಗ್ ಮಾಡುತ್ತಿದ್ದಾರೆ. ಎಲ್ಲಾದರೂ ಅಕ್ರಮ ಆಮದು (Illegal Import) ಅಥವಾ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ, ತಕ್ಷಣವೇ ದಾಖಲೆ ಸಮೇತ ಮತ್ತು ಅದನ್ನು ಮಾಡುತ್ತಿರುವವರ ಹೆಸರು ಸಮೇತ ನೇರವಾಗಿ ಭಾರತದ ಗೃಹ ಸಚಿವಾಲಯಕ್ಕೆ (Home Ministry) ದೂರು ಕಳುಹಿಸುತ್ತಾರೆ.

ಇದರ ಆಧಾರದ ಮೇಲೆ ಸಂಬಂಧಿಸಿದ ಸಿಬಿಐ (CBI), ಜಾರಿ ನಿರ್ದೇಶನಾಲಯ (ED) ಮತ್ತು ಡಿಆರ್‌ಐ (DRI - Directorate of Revenue Intelligence) ಅಧಿಕಾರಿಗಳು ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಜೈಲಿಗಟ್ಟುತ್ತಿದ್ದಾರೆ. ಇಂಪೋರ್ಟ್ ಮಾಡುವಾಗ ಕಸ್ಟಮ್ಸ್ ಅಥವಾ ಯಾವುದೇ ಇಲಾಖೆಯ ಅಧಿಕಾರಿಗಳು ತಪ್ಪು ಮಾಡಿದರೂ ಇವರು ನೇರವಾಗಿ ಹೋಂ ಮಿನಿಸ್ಟ್ರಿಗೆ ದೂರು ನೀಡುತ್ತಾರೆ.

ರೈತರಿಗೆ ಸಿಕ್ಕ ಆರ್ಥಿಕ ಲಾಭ: ಕೃಷಿ ಆರ್ಥಿಕತೆ ಮತ್ತು ತಾಂತ್ರಿಕ ಕೃಷಿಯಲ್ಲಿ ಅಪ್ರತಿಮ ಪ್ಯಾಶನ್ ಮತ್ತು ಶಕ್ತಿ ಹೊಂದಿರುವ ಇವರ ಈ ನಿರಂತರ ರಿಸರ್ಚ್ ಹಾಗೂ ಕಾನೂನು ಹೋರಾಟದ ಕಾರಣದಿಂದಾಗಿ, ದೇಶದ 1 ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಕರಿಮೆಣಸು ಉತ್ಪಾದಿಸುವ ಪ್ರತಿ ಕೃಷಿಕನಿಗೆ ಪ್ರತಿ ವರ್ಷ ಪ್ರತಿ ಕೆಜಿಗೆ ಕನಿಷ್ಠ 150 ರೂಪಾಯಿಗಳಷ್ಟು ಹೆಚ್ಚಿನ ದರ ನಿರಂತರವಾಗಿ ಸಿಗುವಂತಾಗಿದೆ. ಈ ಮಹತ್ಕಾರ್ಯಕ್ಕೆ ಬೆಳೆಗಾರರ ಸಂಘ, ಸರ್ಕಾರಿ ಇಲಾಖೆಗಳು ಹಾಗೂ ಪ್ರಮುಖವಾಗಿ ಇವರೊಂದಿಗೆ ಬೆನ್ನೆಲುಬಾಗಿ ನಿಂತ ಕೆ. ಕೆ. ವಿಶ್ವ ಅವರು ದೆಹಲಿ ಪ್ರವಾಸ ಹಾಗೂ ಹಣಕಾಸು ಸಚಿವಾಲಯದ (Finance Ministry) ಚರ್ಚೆಗಳ ವೇಳೆ ಸದಾ ಜೊತೆಯಲ್ಲಿದ್ದರು.

ತಮಗೆ ಈ ಹೋರಾಟದ ಮನೋಭಾವ ಬರಲು ಕೊಡಗಿನ ರಕ್ತದಲ್ಲೇ ಇರುವ 'ಸ್ಪೋರ್ಟ್ಸ್‌ಮ್ಯಾನ್‌ಶಿಪ್' (ಕ್ರೀಡಾ ಮನೋಭಾವ) ಕಾರಣ ಎನ್ನುವ ಇವರು, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವೇ ತಮ್ಮ ಎಲ್ಲಾ ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆ ಎನ್ನುತ್ತಾರೆ. ಪ್ರಸ್ತುತ ಇವರು ಸಿಪಿಎ (CPA) ಎಕ್ಸಿಕ್ಯೂಟಿವ್ ಕಮಿಟಿ ಮೆಂಬರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

📜 ಸಾಗು ಮತ್ತು ಜಮ್ಮಾ ಭೂಮಿ ಕಾಯ್ದೆ (Sagu & Jamma Land Act) ಹೋರಾಟ

ಕೊಡಗು ಜಿಲ್ಲೆಗೆ ತನ್ನದೇ ಆದ ವಿಶಿಷ್ಟ ಸಾಂಪ್ರದಾಯಿಕ ಭೂಮಿ ಹಕ್ಕುಗಳಿವೆ. ಕರ್ನಾಟಕ ಭೂ ಕಂದಾಯ ಕಾಯ್ದೆ (Karnataka Land Revenue Act) ಅಡಿಯಲ್ಲಿ ಬರುವ 'ಸಾಗು ಮತ್ತು ಜಮ್ಮಾ ಭೂಮಿ ಕಾಯ್ದೆ' ಕೊಡಗಿನ ಮೂಲ ನಿವಾಸಿಗಳ ಹಕ್ಕಾಗಿದೆ. ಈ ಕಾಯ್ದೆಯ ಪರವಾಗಿ ಪ್ರದೀಪ್ ಪೂವಯ್ಯ ಅವರು ಸುದೀರ್ಘ ಕಾಲ ಶ್ರಮಿಸಿದ್ದಾರೆ. ಇವರ ನಿರಂತರ ಪರಿಶ್ರಮದ ಫಲವಾಗಿ ಇತ್ತೀಚೆಗೆ (ಡಿಸೆಂಬರ್ 2025 ರಲ್ಲಿ) ವಿಧಾನಸಭೆಯಲ್ಲಿ ಮಹತ್ವದ 'ಪೌತಿ ಖಾತೆ ಕಾಯ್ದೆ' ಜಾರಿಯಾಯಿತು. ಇದಕ್ಕೆ ಪ್ರಸ್ತುತ ಎಂಎಲ್‌ಎ ಗಳಾದ ಪೊನ್ನಣ್ಣ ಹಾಗೂ ಮಂತರ್ ಗೌಡ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಇದಕ್ಕೂ ಮೊದಲು 2012ರಲ್ಲಿ ಈ ಕಾಯ್ದೆ ಬಗ್ಗೆ ಚರ್ಚೆ ಆದಾಗ ಅಂದಿನ ಎಂಎಲ್‌ಎ ಆಗಿದ್ದ ಕೆ. ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರು ಕೂಡ ಆಪಾರ ಶ್ರಮವಹಿಸಿದ್ದಾರೆ.

📝 ನಿಯಮಗಳ ರಚನೆಗೆ (Rules Framing) ಒತ್ತಾಯ

"ಯಾವುದೇ ಆಕ್ಟ್ (ಕಾಯ್ದೆ) ಸದನದಲ್ಲಿ ಪಾಸಾದರೂ, ಅಧಿಕಾರಿ ವರ್ಗ (Bureaucrats) ಅದಕ್ಕೆ ಸೂಕ್ತ ನಿಯಮಗಳನ್ನು (Rules) ರೂಪಿಸದಿದ್ದರೆ ಆ ಕಾಯ್ದೆಯಿಂದ ಜನರಿಗೆ ಯಾವುದೇ ಫಲ ಸಿಗುವುದಿಲ್ಲ."

ರಾಷ್ಟ್ರಪತಿಗಳ ಅಂಕಿತ ಸಿಕ್ಕರೂ ಇನ್ನೂ ಪೂರ್ಣ ಅನುಷ್ಠಾನಗೊಳ್ಳದ ಈ ಕಾಯ್ದೆಗೆ ಬಿಗಿಯಾದ ರೂಲ್ಸ್ ಫ್ರೇಮ್ ಮಾಡಲು ಪ್ರಸ್ತುತ ಶಾಸಕರಿಗೆ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ (CPA) ವತಿಯಿಂದ ಮನವಿ ಮಾಡಲಾಗುತ್ತಿದೆ. ಇವರು ಸಿದ್ಧಪಡಿಸಿಕೊಟ್ಟಿರುವ ಇನ್‌ಪುಟ್ ಡಾಕ್ಯುಮೆಂಟ್‌ಗಳ ಆಧಾರದ ಮೇಲೆ ಈ ರೂಲ್ಸ್ ಜಾರಿಯಾದಲ್ಲಿ, ಕೊಡಗಿನ 100ಕ್ಕೆ 90ರಷ್ಟು ಮೂಲ ನಿವಾಸಿಗಳ ಭೂ ಸಂಬಂಧಿತ ಸಮಸ್ಯೆಗಳು ಕಾಯಂ ಆಗಿ ನಿವಾರಣೆಯಾಗಲಿವೆ. ಇಲ್ಲದಿದ್ದರೆ ಕಂದಾಯ ಅಧಿಕಾರಿಗಳು ಕಾನೂನು ದುರ್ಬಳಕೆ ಮಾಡಿಕೊಂಡು ಲಂಚದ ಆಮಿಷ ಒಡ್ಡಿ ರೈತರಿಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಸಿಪಿಎ ಕಳೆದ 6 ವರ್ಷಗಳಿಂದ ಸತತ ಪ್ರಯತ್ನ ನಡೆಸುತ್ತಿದೆ.

ಇದರೊಂದಿಗೆ ಮಡಿಕೇರಿಯ 'ಕೊಡಗು ಸೇವಾ ಕೇಂದ್ರ'ದ ಮೂಲಕ ಎಲ್ಲಾ ಸಣ್ಣ ಕೃಷಿಕರಿಗೂ ಅವರ ಭೂ ದಾಖಲಾತಿಗಳ ಬಗ್ಗೆ ಸಂಪೂರ್ಣವಾಗಿ ಉಚಿತವಾಗಿ ಸಹಕಾರ ಮತ್ತು ಮಾರ್ಗದರ್ಶನ ನೀಡಲಾಗಿದ್ದು, ಪ್ರದೀಪ್ ಪೂವಯ್ಯ ಅವರು ಈ ಕೇಂದ್ರಕ್ಕೆ ನಿರಂತರ ಆರ್ಥಿಕ ಹಾಗೂ ತಾಂತ್ರಿಕ ಸಹಾಯ ಒದಗಿಸುತ್ತಿದ್ದಾರೆ. "ಅಗ್ರಿ ಎಕನಾಮಿಕ್ಸ್‌ನಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತು ಲಾಭ ಮಾಡುವುದು ನನ್ನ ಕನಸು," ಎಂದು ಇವರು ಆಶಿಸುತ್ತಾರೆ.

🛡️ ಕೃಷಿ ರಕ್ಷಣೆ ಮತ್ತು ಸರ್ಫೇಸಿ ಕಾಯ್ದೆ (SARFAESI Act) ವಿವಾದ

📢 NDRF ಬೆಳೆ ನಷ್ಟ ಪರಿಹಾರ ಜಾಗೃತಿ:

2018-19ರ ಭೀಕರ ಪ್ರವಾಹ ಮತ್ತು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಮಳೆಹನಿಯಿಂದಾಗಿ ಶೇಕಡಾ 33 ರಷ್ಟು ಬೆಳೆ ನಷ್ಟವಾದಾಗ ಎನ್‌ಡಿಆರ್‌ಎಫ್ (NDRF) ನಿಯಮಾವಳಿಗಳ ಪ್ರಕಾರ ಪರಿಹಾರ ಕೊಡಬೇಕು ಎಂಬುದು ಕೊಡಗಿನ ಯಾರಿಗೂ ಗೊತ್ತಿರಲಿಲ್ಲ. ಸಿಪಿಎ ಮೂಲಕ ಪ್ರದೀಪ್ ಪೂವಯ್ಯ ಅವರು ಈ ಬಗ್ಗೆ ಭಾರಿ ಜಾಗೃತಿ ಅಭಿಯಾನ (Awareness Campaign) ನಡೆಸಿ ಜಾಗೃತಿ ಮೂಡಿಸಿದ್ದರು ಮತ್ತು ಪ್ರತಿ ರೈತರಿಗೆ ಬೆಳೆ ಹಾನಿ ಆದಾಗ ನಷ್ಟ ಈಡು ಮಾಡುವ ಜಾಗೃತಿ ಮೂಡಿಸುತ್ತಲೇ ಬಂದಿದ್ದಾರೆ. ಈ ನಷ್ಟ ಪರಿಹಾರವನ್ನು ಜಿಲ್ಲಾಧಿಕಾರಿಯವರು ಕೃಷಿ ಇಲಾಖೆ ಹಾಗೂ ಕಾಫಿ ಬೋರ್ಡ್ ಮುಖಾಂತರ ಎಲ್ಲಾ ರೈತರಿಗೆ ತಲುಪಿಸಲು ಶ್ರಮವಹಿಸಿದ್ದೇವೆ, ಅವೇರ್ನೆಸ್ ಕ್ಯಾಂಪಿನನ್ನು ಯಶಸ್ವಿಯಾಗಿ ಮಾಡಿದ್ದೇವೆ.

⚖️ SARFAESI ಕಾಯ್ದೆ ಸವಾಲು:

ಪ್ರಸ್ತುತ ಕರ್ನಾಟಕ ಹೈಕೋರ್ಟ್ ಪ್ಲಾಂಟೇಷನ್ ಬೆಳೆಗಳಾದ ರಬ್ಬರ್, ಪೆಪ್ಪರ್, ಕಾಫಿ ಈ ಬೆಳೆಗಳಿಗೆ ವಿನಾಯಿತಿ ಇಲ್ಲ ಎಂದು ಹೇಳಲಾಗುತ್ತಿದೆ ಮತ್ತು ಲ್ಯಾಂಡ್ ಸೀಲಿಂಗ್ ಇಲ್ಲ ಅದಕ್ಕೆ ಸರ್ಫೇಸಿ ಸರ್ಕಾರ ಕಾನೂನನ್ನು ಮಾಡಬೇಕು. ಹೈಕೋರ್ಟ್ ಆದೇಶ ತಪ್ಪು ಎಂದು ಹೇಳಿ ಇದಕ್ಕೆ ಸಿಪಿಎ ಮೂಲಕ ಮನವಿ ಮಾಡಲಾಗುತ್ತಿದೆ, ತೋಟಗಾರಿಕಾ ಬೆಳೆಗಳನ್ನು ಬ್ಯಾಂಕ್‌ಗಳ ಕಠಿಣ ಜಪ್ತಿ ಕ್ರಮಗಳಿಂದ ರಕ್ಷಿಸಲು ಸರ್ಕಾರ ವಿಶೇಷ ಕಾನೂನು ತರಬೇಕೆಂದು ಸಿಪಿಎ ಮೂಲಕ ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ತರಲಾಗುತ್ತಿದೆ.

ಕಾಫಿ ಉದ್ಯಮದಲ್ಲಿ ಮಹಾ ಕ್ರಾಂತಿ: ಕ್ಲೋನಿಂಗ್ ಪ್ಲಾಂಟ್ ಪ್ರಯೋಗ (Coffee Cloning Technology)

ಭಾರತೀಯ ಕಾಫಿ ರಂಗದಲ್ಲಿ ಪ್ರದೀಪ್ ಪೂವಯ್ಯ ಅವರು ಮಾಡುತ್ತಿರುವ ಅತಿ ದೊಡ್ಡ ವೈಜ್ಞಾನಿಕ ಕ್ರಾಂತಿ ಎಂದರೆ ಕಾಫಿ ಗಿಡಗಳ ಕ್ಲೋನಿಂಗ್ ಪ್ರಯೋಗ. ಪ್ರಸ್ತುತ ಆರ್ಥಿಕ ಪರಿಸ್ಥಿತಿ ಕಾಫಿಯಲ್ಲಿ ಈಗ ಬೀಜದಿಂದ ಬಿತ್ತನೆ ಮಾಡಿಕೊಳ್ಳುತ್ತಿದ್ದೇವೆ ಇದರಿಂದ ಪೂರ್ಣ ಗುಣಮಟ್ಟದ ಕಾಫಿ ಗಿಡ ಬೆಳೆಯುವುದಿಲ್ಲ, ಪ್ಯೂರಿಟಿ ಸಾಕಾಗುವುದಿಲ್ಲ.

Coffee Cloning Nursery

ತೇಲಪಂಡ ಪ್ರದೀಪ್ ಪೂವಯ್ಯ ಅವರು ಈ ಮೊದಲು ಟಾಟಾ ಟೀ (Tata Tea) ಕಂಪನಿಯಲ್ಲಿ ಕೆಲಸ ಮಾಡಿದ್ದಾಗ, ಅಲ್ಲಿ ಕ್ಲೋನಿಂಗ್ ಮಾಡಿದ್ದರಿಂದ ಅತ್ಯುತ್ತಮ ಹಾಗೂ ಉತ್ತಮ ಫಸಲು ದೊರಕುತ್ತಿತ್ತು. ಇದನ್ನು ಕಾಫಿಯಲ್ಲಿ ಏಕೆ ಮಾಡಬಾರದು ಎಂದು ಯೋಚಿಸಿ, ಅದರಿಂದ ಸಣ್ಣ ರೈತರಿಗೆ ಹಾಗೂ ಎಲ್ಲರಿಗೂ ತುಂಬಾ ಉಪಯೋಗವಾಗುತ್ತದೆ ಎಂದು ಭಾವಿಸುತ್ತಾ ಅವರು ಕಾಫಿ ಬೋರ್ಡ್ (Coffee Board) ಅನ್ನು ಸಂಪರ್ಕಿಸಿದರು. ಅಲ್ಲಿರುವ ವಿಜ್ಞಾನಿಗಳೊಂದಿಗೆ ಚರ್ಚಿಸಿ ಒಂದು ತಂಡವನ್ನು ಮಾಡಿ ಅದರ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಈಗಲೂ ಕೂಡ ಆ ತಂಡದೊಂದಿಗೆ ಸಕ್ರಿಯವಾಗಿ ಮೀಟಿಂಗ್‌ಗಳನ್ನು ಮಾಡುತ್ತಾ, ಕೊನೆಗೆ ರಜಾ ದಿನಗಳಲ್ಲೂ ಸಹ ಬ್ಯಾಕ್-ಟು-ಬ್ಯಾಕ್ ಆನ್‌ಲೈನ್ ಮೀಟಿಂಗ್‌ಗಳನ್ನು (Online Meetings) ಮಾಡಲಾಗುತ್ತದೆ.

ಟೀ ಕಟ್ಟಿಂಗ್ಸ್ ನಲ್ಲಿ ಗಿಡಗಳನ್ನು ಮಾಡುತ್ತಾರೆ, ಆದರೆ ನಾವೆಲ್ಲ ಕಟ್ಟಿಂಗ್ಸ್ ನಲ್ಲಿ ಕಾಫಿ ಗಿಡವನ್ನು ಮಾಡುವುದಿಲ್ಲ; ಕಟ್ಟಿಂಗ್ಸ್ ಇಂದ ಮಾಡುವುದನ್ನು ಕ್ಲೋನಿಂಗ್ ಟೆಕ್ನಿಕ್ ಎಂದು ಹೇಳುತ್ತಾರೆ. ಇದರಿಂದ ಗಿಡದ ನಿಜವಾದ ಗುಣಗಳು ಹಾಗೆ ಉಳಿಯುತ್ತದೆ ಪ್ಯೂರಿಟಿ ಸಿಗುತ್ತದೆ. ಟೀ ಕ್ಲೋನಿಂಗ್ ಟೆಕ್ನಿಕ್ ಅನ್ನು 20 ವರ್ಷಗಳ ಮುಂಚೆಯೇ ಪೂರ್ಣಗೊಳಿಸಲಾಗಿದೆ. ಶೇಕಡ ನೂರರಷ್ಟು ಎಲ್ಲ ಗಿಡಗಳು ಕ್ಲೋನಿಂಗ್ ನಿಂದ ಬಂದು ಪ್ಯೂರಿಟಿಯಲ್ಲಿದೆ ಮತ್ತು ಇದು 1960 ರಿಂದ ಪ್ರಾರಂಭವಾಯಿತು.

ಈ ಕ್ಲೋನಿಂಗ್ ಟೆಕ್ನಿಕ್ ನ ಪ್ರಾಮುಖ್ಯತೆಯನ್ನು ಗಮನಿಸಿ ಕಳೆದ 5 ವರ್ಷಗಳ ಹಿಂದಿನಿಂದ ಸಿಪಿಎ ಮುಖಾಂತರ ಕಾಫಿ ಬೋರ್ಡ್ ಸೈಂಟಿಸ್ಟ್ಗಳೊಂದಿಗೆ ಸೇರಿ ಕ್ಲೋನಿಂಗ್ ಪ್ರಾಡಕ್ಟ್ಸ್ ಕಾಫಿ ಸಿದ್ಧಪಡಿಸಿದ್ದೇವೆ. ಹಿಂದೆ ಟಾಟಾ ಕಾಫಿ ಹಾಗೂ ಟಾಟಾ ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುವಾಗ ಈ ವಿದ್ಯೆಯನ್ನು ಕಲಿದ್ದ ಪ್ರದೀಪ್ ಪೂವಯ್ಯ ಅವರು, ಕಾಫಿ ಬೋರ್ಡ್ ಜೈನ್ ಇರಿಗೆಶನ್ (Jain Irrigation) ಟಿಶ್ಯೂ ಕಲ್ಚರ್ ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ.

ಎಲ್ಲಾ ಗಿಡದ ಸ್ಯಾಂಪಲ್ ಗಳನ್ನು ತೆಗೆದು 209 ರಿಂದ ಕ್ಲೋನಿಂಗ್ ಮಿಕ್ಸ್ ಬರದ ರೀತಿಯಲ್ಲಿ ಸಪರೇಟ್ ಸೆಕ್ಷನ್ ಗಳನ್ನು ಮಾಡಿ 150 ರಿಂದ 200 ಎಕರೆ ಪ್ರದೇಶಗಳಿಂದ ಸುಮಾರು 600 ರೀತಿ ಗಿಡಗಳನ್ನು ಆಯ್ಕೆ ಮಾಡಿ ಜಿಯೋ ಟ್ಯಾಗನ್ನು (Geo-Tag) ಮಾಡಿ 2 ರಿಂದ 6 ವರ್ಷ ಮಾನಿಟರ್ ಮಾಡಿ ಪ್ರತಿ ವರ್ಷದ ಫಸಲು ತೂಕವನ್ನು ಮಾಡಿ ಪರೀಕ್ಷೆ ಮಾಡಲಾಗುತ್ತಿದೆ. ಅದರ ನಂತರ ಪ್ರತಿ ಗಿಡಕ್ಕೆ 20 ರಿಂದ 50 ಕೆಜಿ ಫಸಲು ಹೆಚ್ಚು ಬರುವ ಸಾಮರ್ಥ್ಯವಿರುತ್ತದೆ.

🌍 ಮುಂದಿನ ಯೋಜನೆ ಮತ್ತು ಜಾಗತಿಕ ಮಾರುಕಟ್ಟೆ:

ಮುದ್ದಿನ ವರ್ಷ 1 ಲಕ್ಷ ಗಿಡಗಳನ್ನು ತಯಾರು ಮಾಡಿ ರೈತರಿಗೆ ಕೊಡಲಾಗುತ್ತದೆ. ಇದರಿಂದ ಮುಂಬರುವ ವರ್ಷಗಳಲ್ಲಿ ಈಗಿನ ಪ್ರಕಾರ ಭಾರತದಲ್ಲಿ 3 ಲಕ್ಷ ಮೆಟ್ರಿಕ್ ಟನ್ ನಷ್ಟು ಕಾಫಿ ಉತ್ಪಾದನೆ ಆಗುತ್ತಿದ್ದು, ಈ ಕ್ಲೋನಿಂಗ್ ಟೆಕ್ನಿಕ್ ಮುಖಾಂತರ ಬರುವ ಗಿಡವನ್ನು ಬೆಳೆಸಿದಾಗ ಅದು 5 ಲಕ್ಷ ಮೆಟ್ರಿಕ್ ಟನ್ ನಷ್ಟು ಕಾಫಿ ಬೆಳೆ ಬರುವ ಸಾಧ್ಯತೆ ಇದೆ.

ಬ್ರೆಜಿಲ್ ನಲ್ಲಿ 1993ರಿಂದ ಕ್ಲೋನಿಂಗ್ ಮಾಡಲಾಗುತ್ತಿದೆ. ಅದರಿಂದಾಗಿ ಅಲ್ಲಿ ಉತ್ಪಾದನೆ ಬಹಳ ಹೆಚ್ಚಿದೆ. ಈ ರೀತಿಯ ಕ್ಲೋನಿಂಗ್ ಗಿಡಗಳನ್ನು ಬಳಸಿದರೆ ಭಾರತದ ಕಾಫಿ ಉತ್ಪಾದನೆ ಶೇಕಡಾ 50 ರಷ್ಟು ಹೆಚ್ಚಾಗುತ್ತದೆ.

👨‍👩‍👧‍👦 ಕುಟುಂಬ ಪರಿಚಯ ಮತ್ತು ಸಾಮಾಜಿಕ ಸೇವೆ

ಪ್ರದೀಪ್ ಪೂವಯ್ಯ ಅವರ ಯಶಸ್ಸಿನ ಹಿಂದೆ ಅವರ ಗೌರವಾನ್ವಿತ ಕುಟುಂಬದ ಹಿನ್ನೆಲೆಯೂ ಇದೆ. ಇವರ ತಂದೆಯವರಾದ ದಿವಂಗತ ತೇಲಪಂಡ ಮಾಣಿಚ್ಚ ಅವರು ಸಕ್ರಿಯ ಕಾಂಗ್ರೆಸ್ ಮುಖಂಡರಾಗಿ ಜನಸೇವೆ ಮಾಡಿದವರು. ತಾಯಿ ದಿವಂಗತ ಸೀತವ್ವ.

🏫 ಸಂವಾದ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ (Samvaad Institute)

Samvaad Institute Logo
Radhika Poovayya

ಶ್ರೀಮತಿ ರಾಧಿಕಾ ಪೂವಯ್ಯ (Founder Trustee)

ಇವರ ಧರ್ಮಪತ್ನಿಯವರಾದ ರಾಧಿಕಾ ಪೂವಯ್ಯ ಅವರು ಪ್ರಖ್ಯಾತ ವಾಕ್ ಶ್ರವಣ ತಜ್ಞರಾಗಿದ್ದು (Speech-Language Pathologist), ಪೋಸ್ಟ್ ಗ್ರಾಜುಯೇಷನ್ ನಂತರ ಕಳೆದ 20 ರಿಂದ 30 ವರ್ಷಗಳಿಂದ 'ಸಂವಾದ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್' (Samvaad Institute of Speech) ಫೌಂಡರ್ ಟ್ರಸ್ಟಿಯಾಗಿದ್ದಾರೆ (Founder Trustee).

🌟 ಸಂಸ್ಥೆಯ ಹೆಮ್ಮೆಯ ಸೇವೆ ಮತ್ತು ಶೈಕ್ಷಣಿಕ ಸಾಧನೆ:

  • ಶೈಕ್ಷಣಿಕ ಶ್ರೇಷ್ಠತೆ: ಸಂವಾದ ಸಂಸ್ಥೆಯು ಬೆಂಗಳೂರು ಸಿಟಿ ಯೂನಿವರ್ಸಿಟಿಗೆ ಸಂಯೋಜನೆಗೊಂಡಿದ್ದು, ಭಾರತೀಯ ಪುನರ್ವಸತಿ ಮಂಡಳಿ (Rehabilitation Council of India - RCI) ಯಿಂದ ಅಧಿಕೃತ ಮಾನ್ಯತೆ ಪಡೆದಿದೆ.
  • ಪ್ರಮುಖ ಕೋರ್ಸ್‌ಗಳು: ಸಂಸ್ಥೆಯು ಪ್ರತಿ ವರ್ಷ ವಾಕ್ ಮತ್ತು ಶ್ರವಣ ಚಿಕಿತ್ಸಾ ಕ್ಷೇತ್ರದಲ್ಲಿ ಅತ್ಯುತ್ತಮ ತಜ್ಞರನ್ನು ಸೃಷ್ಟಿಸಲು BASLP (Bachelor of Audiology and Speech-Language Pathology) ಮತ್ತು MASLP (Master of Audiology and Speech-Language Pathology) ಕೋರ್ಸ್‌ಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.
  • ಉಚಿತ ಜನಸೇವೆ: ಈ ಸಂಸ್ಥೆಯ ಮೂಲಕ ವರ್ಷಕ್ಕೆ ಸುಮಾರು 15,000 ಕ್ಕೂ ಹೆಚ್ಚು ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಸೇವೆ (Free Service) ನೀಡಲಾಗುತ್ತಿದೆ.
  • ವಿಶೇಷ ಸೌಲಭ್ಯಗಳು: ಶ್ರವಣ ಮತ್ತು ವಾಕ್ ದೋಷವುಳ್ಳ ಬಡ ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಚಿಕಿತ್ಸೆ, ಶ್ರವಣ ಸಾಧನಗಳ ವಿತರಣೆ ಮತ್ತು ನಿರಂತರ ಉಚಿತ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಾ ಗ್ರಾಮೀಣ ಭಾಗದ ಶ್ರವಣದೋಷ ತಡೆಗಟ್ಟುವಲ್ಲಿ ಸಂಸ್ಥೆಯು ದೇಶದಲ್ಲೇ ಮುಂಚೂಣಿಯಲ್ಲಿದೆ.

ಇವರ ಹಿರಿಯ ಮಗಳು ದುಬೈನಲ್ಲಿ ನೆಲೆಸಿದ್ದಾರೆ, ಕಿರಿಯ ಮಗಳು ಕೇಂಬ್ರಿಡ್ಜ್ ನಲ್ಲಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.

🔚 ಮುಕ್ತಾಯ

ತಮ್ಮ ಅದ್ಭುತ ಕೃಷಿ ಜ್ಞಾನ, ಕಾರ್ಪೊರೇಟ್ ಅನುಭವ ಹಾಗೂ ಕೃಷಿಕರ ಪರವಾದ ದೃಢ ಹೋರಾಟದ ಮೂಲಕ ಪ್ರದೀಪ್ ಪೂವಯ್ಯ ತೇಲಪಂಡ ಅವರು ಇಡೀ ದೇಶದ ಕೃಷಿ ರಂಗಕ್ಕೆ ಮಾದರಿಯಾಗಿದ್ದಾರೆ. ಸಣ್ಣ ರೈತರ ಆರ್ಥಿಕ ಸಬಲೀಕರಣವೇ ತಮ್ಮ ಉಸಿರು ಎಂದು ಬದುಕುತ್ತಿರುವ ಇವರ ಕೃಷಿ ಕ್ರಾಂತಿ ನಿರಂತರವಾಗಿ ಸಾಗಲಿ ಎಂಬುದೇ ನಾಡಿನ ಆಶಯ.

0 0 votes
Article Rating
Subscribe
Notify of
guest
0 Comments
Oldest
Newest Most Voted
error: Content is protected !!
0
Would love your thoughts, please comment.x
()
x