ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆಯಿಂದ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಣೆ
ಮಡಿಕೇರಿ: ಸ್ಥಳೀಯ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆ (ರಿ) ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಾಡಿನ ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗದಂತೆ ಪೋಷಕರು ವಹಿಸಬೇಕಾದ ಎಚ್ಚರಿಕೆಗಳ ಕುರಿತು ವಿಶೇಷ ಸಂದೇಶ ನೀಡಲಾಯಿತು. ಜೊತೆಗೆ, ಸ್ವಚ್ಛ ಮತ್ತು ನಿರ್ಮಲ ಸಮಾಜ ನಿರ್ಮಾಣದ ಬಗ್ಗೆಯೂ ಸಭಿಕರಿಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಕೆ. ಬಿ. ಸೂರ್ಯ ಕುಮಾರ್ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾ ವೇದಿಕೆಯ ಅಧ್ಯಕ್ಷರಾದ ಮಹೇಶ್ ಆರ್ (ಅಪ್ಪು) ವಹಿಸಿದ್ದರು. ಗೌರವ ಅತಿಥಿಗಳಾಗಿ ನಿವೃತ್ತ ಸೇನಾನಿ ನಂದಿರ ಅಯ್ಯಪ್ಪ, ಪ್ರದೀಪ್ ಪಾಯಸ್, ಸಾಧಿಕ್ ಪಾಷಾ ಹಾಗೂ ನಗರಸಭಾ ಸದಸ್ಯರಾದ ಕೆ. ಎಸ್. ರಮೇಶ್ ಅವರು ಉಪಸ್ಥಿತರಿದ್ದರು.
ಈ ಶುಭ ಸಂದರ್ಭದಲ್ಲಿ ವೇದಿಕೆಯ ಮಹಿಳಾ ಘಟಕದ ಸದಸ್ಯರು ದೇಶಭಕ್ತಿ ಗೀತೆಗಳನ್ನು ಹಾಡಿ ಎಲ್ಲರ ಗಮನ ಸೆಳೆದರು. ಅಲ್ಲದೆ, ದೇಶಕ್ಕಾಗಿ ವೀರ ಮರಣ ಹೊಂದಿದ ಯೋಧರಿಗೆ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ಅಂತಿಮವಾಗಿ, ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಲಾಯಿತು. ನೆರೆದಿದ್ದ ನಾಗರಿಕರಿಗೆಲ್ಲ ಲಘು ಉಪಹಾರ ನೀಡುವುದರೋಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.