ಈಶ ಫೌಂಡೇಷನ್ ವತಿಯಿಂದ ಆ.24 ರಂದು ಕುಶಾಲನಗರದಲ್ಲಿ 17ನೇ ಆವೃತ್ತಿಯ ‘ಈಶ ಗ್ರಾಮೋತ್ಸವ’
ಈಶ ಫೌಂಡೇಷನ್ ವತಿಯಿಂದ ಆ.24 ರಂದು ಕುಶಾಲನಗರದಲ್ಲಿ 17ನೇ ಆವೃತ್ತಿಯ ‘ಈಶ ಗ್ರಾಮೋತ್ಸವ’
ಮಡಿಕೇರಿ: ಈಶ ಫೌಂಡೇಷನ್ ವತಿಯಿಂದ 17ನೇ ಆವೃತ್ತಿಯ ‘ಈಶ ಗ್ರಾಮೋತ್ಸವ’ದ ಭಾಗವಾಗಿ ಕೊಡಗು ಕ್ಲಸ್ಟರ್‍ನ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿಗಳನ್ನು ಒಳಗೊಂಡ ‘ರೂರಲ್ ಪ್ರೀಮಿಯರ್ ಲೀಗ್’ ಪಂದ್ಯಾವಳಿ ಆ.24 ರಂದು ಕುಶಾಲನಗರದ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಈಶ ಸಂಸ್ಥೆಯ ಸ್ವಯಂ ಸೇವಕರಾದ ಎಂ.ಎನ್.ಅಖಿಲ್, ಈಶ ಗ್ರಾಮೋತ್ಸವ ಕಳೆದ ಹದಿನಾರು ವರ್ಷಗಳಿಂದ ನಡೆಯುತ್ತಿದ್ದು, ಈ ಬಾರಿಯದ್ದು 17ನೇ ಆವೃತ್ತಿಯದ್ದಾಗಿದೆ. ಪ್ರಮುಖವಾಗಿ ಗ್ರಾಮಿಣ ಸುಪ್ತ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಗ್ರಾಮೋತ್ಸವದ ಪ್ರಮುಖ ಉದ್ದೇಶವಾಗಿದೆಯೆಂದು ತಿಳಿಸಿದರು. ಕೊಡಗು ಕ್ಲಸ್ಟರ್ ಮಟ್ಟದಲ್ಲಿ ಪುರುಷರಿಗೆ ವಾಲಿಬಾಲ್ ಮತ್ತು ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಗ್ರಾಮ ಪಂಚಾಯ್ತಿಗಳಲ್ಲಿನ ತಂಡಗಳಿಗೆ ಮಾತ್ರ ಅವಕಾಶವನ್ನು ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಆಟಗಾರರಿಗೆ ಇದರಲ್ಲಿ ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದರು. ಪಂದ್ಯಾವಳಿ ಆ.24 ರಂದು ಬೆಳಗ್ಗೆ 8 ಗಂಟೆಗೆ ಕುಶಾಲನಗರದಲ್ಲಿ ಪ್ರಾರಂಭಗೊಳ್ಳಲಿದೆಯೆಂದರು.
ಗ್ರಾಮೋತ್ಸವದಲ್ಲಿ ಪಾಲ್ಗೊಳ್ಳಲು ಆಸಕ್ತವಾಗಿರುವ ತಂಡಗಳ ಪ್ರವೇಶ ಉಚಿತವಾಗಿದೆ. ತಂಡಗಳ ಹೆಸರನ್ನು ಮೊ.8861641755, 8300030999 ಗೆ ನೀಡಿ ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದರು. ಕ್ಲಸ್ಟರ್ ಮಟ್ಟದ ಪಂದ್ಯಾವಳಿಯಲ್ಲಿ ವಿಜೇತ ತಂಡ ಮತ್ತು ದ್ವಿತೀಯ ಸ್ಥಾನ ಪಡೆಯುವ ತಂಡಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗುತ್ತದೆ. ವಿಭಾಗೀಯ ಪಂದ್ಯಾವಳಿ ಸೆ.7ರಂದು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ನಡೆಯಲಿದೆ. ಅಂತಿಮ ಪಂದ್ಯಾವಳಿ ಸೆ.21 ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಆಯೋಜಿತವಾಗಿದೆ.
ವಾಲಿಬಾಲ್ ಮತ್ತು ಥ್ರೋಬಾಲ್ ವಿಜೇತ ತಂಡಕ್ಕೆ ತಲಾ 5 ಲಕ್ಷ ರೂ. ಬಹುಮಾನವನ್ನು ನೀಡಲಾಗುತ್ತದೆಂದು ವಿವರಗಳನ್ನಿತ್ತರು. :: 700 ತಂಡಗಳು :: ಈಶ ಗ್ರಾಮೋತ್ಸವ ಕರ್ನಾಟಕದಲ್ಲಿ ಆರಂಭಗೊಂಡು 3 ವರ್ಷಗಳಾಗಿದೆ.ಈ ಸಾಲಿನ ಗ್ರಾಮೋತ್ಸವದಲ್ಲಿ 700ಕ್ಕೂ ಹೆಚ್ಚಿನ ತಂಡಗಳು, 8100ಕ್ಕೂ ಹೆಚ್ಚಿನ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ತಿಳಿಸಿದರು. ಕರ್ನಾಟಕ ಸೇರಿದಂತೆ ಈ ಬಾರಿ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಪುದುಚೇರಿ ಮತ್ತು ಇದೇ ಮೊದಲ ಬಾರಿಗೆ ಒಡಿಶಾ ಸೇರಿದಂತೆ 35 ಸಾವಿರಕ್ಕೂ ಹೆಚ್ಚಿನ ಗ್ರಾಮಗಳನ್ನು ವ್ಯಾಪಿಸಿದೆ. ಪ್ರಸಕ್ತ ಸಾಲಿನ ಗ್ರಾಮೋತ್ಸವದಲ್ಲಿ 6 ಸಾವಿರಕ್ಕು ಹೆಚ್ಚಿನ ಗ್ರಾಮೀಣ ತಂಡಗಳು, 50 ಸಾವಿರಕ್ಕೂ ಹೆಚ್ಚಿನ ಗ್ರಾಮೀಣ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆಗಳಿರುವುದಾಗಿ ತಿಳಿಸಿದರು. ಗ್ರಾಮೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರರಾದ ಕಟ್ಟೆಮನೆ ಮಿಲನ ಅವರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ತಮ್ಮ ತಂಡ ಪಂದ್ಯಾವಳಿಯಲ್ಲಿ ಛಾಂಪಿಯನ್ ಆಗಿ ಹೊರ ಹೊಮ್ಮಿರುವುದಾಗಿ ತಿಳಿಸಿದರು. ಮತ್ತೋರ್ವ ಆಟಗಾರ್ತಿ ಬಿದ್ರುಪಣೆ ಚಂದ್ರಕಲಾ ಕೆ.ಎಂ. ಮಾತನಾಡಿ, ಗ್ರಾಮಿಣ ಪ್ರತಿಭೆಗಳ ಅನಾವರಣಕ್ಕೆ ಈಶ ಗ್ರಾಮೋತ್ಸವ ಸಹಕಾರಿಯಾಗಿದೆಯೆಂದು ತಿಳಿಸಿದರು.