ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಗ್ರಾಮದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮತೋಲನ ಮೂಡುವಂತೆ ಶ್ರಮಿಸುತ್ತಿದ್ದೇನೆ;
ಕಲಿಯಂಡ ಸಂಪನ್ ಅಯ್ಯಪ್ಪ
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿದೆ. ತಾಲ್ಲೂಕು ಕೇಂದ್ರ ಮಡಿಕೇರಿಯಿಂದ 35 ಕಿ.ಮೀ ದೂರದಲ್ಲಿದೆ .ಪ್ರಸ್ತುತ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಕಲಿಯಂಡ ಸಂಪನ್ ಅಯ್ಯಪ್ಪನವರು ಕಾರ್ಯನಿರ್ವಹಿಸುತ್ತಿದ್ದಾರೆ.
ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ಕಲಿಯಂಡ ಸಂಪನ್ ಅಯ್ಯಪ್ಪನವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮ ಗ್ರಾಮ” ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಕಲೆ ಹಾಕಿತ್ತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಅಧ್ಯಕ್ಷರಾದ ಕಲಿಯಂಡ ಸಂಪನ್ ಅಯ್ಯಪ್ಪ ನಾನು ರಾಜಕೀಯ ಕ್ಷೇತ್ರಕ್ಕೆ ಅನಿರೀಕ್ಷಿತವಾಗಿ ಬಂದಿದ್ದೇನೆ, ಅದಕ್ಕೆ ಮುಖ್ಯ ಕಾರಣ ನಮ್ಮ ಗ್ರಾಮದ ಗ್ರಾಮಸ್ಥರ ಒತ್ತಾಸೆ. ಅವರ ಬೆಂಬಲದಿಂದ ನಾನು ಕುಂಜಿಲ ಏ ವಾರ್ಡಿನಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದೆ, ಗೆಲುವು ಸಹ ಸಾಧಿಸಿದೆ, ಈಗ ಅಧ್ಯಕ್ಷನಾಗಿದ್ದೇನೆ” ಆದರಿಂದ ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಮ್ಮ ಗ್ರಾಮದ ಅಭಿವೃದ್ದಿಗಾಗಿ ನಾನು ಶ್ರಮಿಸುತ್ತಿದ್ದೇನೆ ಎಂದು ಕಲಿಯಂಡ ಸಂಪನ್ ಅಯ್ಯಪ್ಪ ತಿಳಿಸಿದರು. ಕಲಿಯಂಡ ಸಂಪನ್ ಅಯ್ಯಪ್ಪ 2021ರಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮೊದಲ ಅವಧಿಯಲ್ಲೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ ಲಿಅಭಿವೃದ್ಧಿ ಕಾಮಗಾರಿಯ ಬಗ್ಗೆ ಮಾತನಾಡಿದ ಅವರು ನಾನು ಗೆದ್ದನಂತರ ಮೊದಲನೆದಾಗಿ ಗ್ರಾಮ ಪಂಚಾಯಿತಿಯ ಸವಲತ್ತುಗಳು ಜನರಿಗೆ ತಲುಪುವ ದೃಷ್ಟಿಯಿಂದ ಗ್ರಾಮದ ಜನರಿಗೆ ಗ್ರಾಮ ಪಂಚಾಯಿತಿಯಿಂದ ಯಾವ ಯಾವ ರೀತಿಯ ಸೇವೆ ಸವಲತ್ತುಗಳು ಬರುವುದೆಂಬುದರ ಬಗ್ಗೆ ಜಾಗೃತಿಯನ್ನು ತರಲು ಪ್ರಯತ್ನಪಟ್ಟಿದ್ದೇನೆ. ಅದಕ್ಕಾಗಿ ಪಾರದರ್ಶಕ ಆಡಳಿತದಿಂದ ಪಂಚಾಯಿತಿಯ ಸವಲತ್ತುಗಳು ನೈಜ ಫಲಾನುಭವಿಗಳಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇನೆ. ಹಾಗೂ ಗ್ರಾಮಸ್ಥರು ಹೆಚ್ಚಿನ ಕಾಳಜಿಯಿಂದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮದ ಅಭಿವೃದ್ಧಿಗೆ ಜೊತೆಯಾಗಿ ನಿಲ್ಲುವಂತೆ ಕೇಳಿಕೊಂಡಿದ್ದೇನೆ ಇದಕ್ಕೆ ಗ್ರಾಮಸ್ಥರು ತುಂಬಾನೆ ಉತ್ಸೂಕತೆದಿಂದ ಭಾಗವಹಿಸುತ್ತಿದಾರೆ ಎಂದರು.
ನನ್ನ ಅವಧಿಯಲ್ಲಿ ಗ್ರಾಮ ಪಂಚಾಯಿತಿಯ ಕಾರ್ಯಾಲಯವನ್ನು ನವೀಕರಿಸಿ ಸುಸಜ್ಜಿತವಾದ ಗ್ರಾಮ ಪಂಚಾಯಿತಿ ಕಾರ್ಯಾಲಯವಾಗಿ ಮಾರ್ಪಾಡಿಸಿದ್ದೇನೆ ಎಂದ ಸಂಪನ್ ಅಯ್ಯಪ್ಪ ಪಂಚಾಯಿತಿಯಲ್ಲಿ ಸಾರ್ವಜನಿಕ ಡಿಜಿಟಲ್ ಲೈಬ್ರರಿಯನ್ನು ತೆರೆಯಲಾಗಿದೆ. ನಮ್ಮ ಗ್ರಾಮದಲ್ಲಿ ಉತ್ತಮವಾದ ಆಡಳಿತ ಮತ್ತು ಅಭಿವೃದ್ಧಿ ಕಾಮಗಾರಿಗಳು ನಡೆಯಲು ಗ್ರಾಮಸ್ಥರು ಎಲ್ಲರನ್ನು ಒಟ್ಟುಗೂಡಿಸಿ ವಾಟ್ಸಪ್ ಗ್ರೂಪ್ ಮಾಡಿ ಅದರ ಮೂಲಕ ಪಂಚಾಯಿತಿಯಲ್ಲಿ ನಡೆಯುವ ಪ್ರತೀ ಕಾಮಗಾರಿಯ ವಿವರಗಳನ್ನು ಎಲ್ಲರಿಗೂ ತಿಳಿಯುವಂತೆ ಮಾಡುತ್ತಿದ್ದೇನೆ ಇದರ ಫಲವಾಗಿ ಭ್ರಷ್ಟಾಚಾರ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿಗಳು ನಮ್ಮ ಗ್ರಾಮದಲ್ಲಿ ನಡೆಯದಂತೆ ತಡೆಯಲು ಸಹಕಾರಿಯಾಗಿದೆ. ಜೊತೆಗೆ ಗ್ರಾಮದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮತೋಲನ ಮೂಡುವಂತೆ ಎಲ್ಲಾ ಜಾತಿ ಧರ್ಮದವರನ್ನು ಒಟ್ಟಾಗಿ ನಡೆಸಿಕೊಂಡು ಹೋಗಲು ಶ್ರಮಿಸುತ್ತಿದ್ದೇನೆ ಎಂದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದಾದರೂ ಕಾಮಗಾರಿಗಳು ನಡೆಯುತ್ತಿದ್ದರೆ ಅದನ್ನು ನಾನು ಖುದ್ದಾಗಿ ವೀಕ್ಷಿಸಿ ಗುಣಮಟ್ಟವನ್ನು ತಿಳಿಯಲು ಪ್ರಯತ್ನಿಸುತ್ತೇನೆ ಅದರಲ್ಲಿ ಯಾವುದಾದರೂ ಕಳಪೆ ಕಾಮಗಾರಿ ನಡೆದದ್ದು ಗಮನಕ್ಕೆ ಬಂದರೆ ಅದರ ಪಾವತಿಯನ್ನು ತಡೆಹಿಡಿಯುತ್ತೇನೆ ಎಂದ ಸಂಪನ್ ಅಯ್ಯಪ್ಪ, ಜನರಿಗೆ ಉತ್ತಮ ಸೇವೆ ನೀಡುವುದರ ಜವಾಬ್ದಾರಿ ಪಂಚಾಯಿತಿಯ ಸಿಬ್ಬಂದಿ ವರ್ಗದವರಿಗೂ ಅಷ್ಟೇ ಮುಖ್ಯವಾಗಿರುತ್ತದೆ. ನಮ್ಮ ಪಂಚಾಯಿತಿಯ ಪಿ.ಡಿ.ಓ ಅಶೋಕ್ ರವರು ಮಾಜಿ ಸೈನಿಕರು ಅವರು ಉತ್ತಮವಾದ ಸೇವೆಯನ್ನು ಹಾಗೂ ಸಹಕಾರವನ್ನು ನೀಡುತ್ತಿದ್ದಾರೆ. ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿಗಳ ನಡುವೆ ಉತ್ತಮ ವಿಶ್ವಾಸ ಮತ್ತು ಒಮ್ಮತದ ವಾತಾವರಣವಿದೆ ಎಂದು ತಿಲೀಸಿದರು.
ನಮ್ಮ ಗ್ರಾಮದ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಗ್ರಾಮ ವಾತ್ಸವ್ಯವನ್ನು ನಮ್ಮ ಗ್ರಾಮದಲ್ಲಿ ವ್ಯವಸ್ಥೆ ಮಾಡಿದ್ದೇವು. ನಮ್ಮ ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ 42 ವರ್ಷಗಳ ಹಿಂದೆ 1980 ಮಂಡಲ ಪಂಚಾಯಿತಿಯ ಸಂದರ್ಭದಲ್ಲಿ ನಡೆದಿತ್ತು ನಂತರ ಇದೀಗ ನನ್ನ ಅವಧಿಯಲ್ಲಿ ನಡೆದಿದೆ. ನಮ್ಮ ಗ್ರಾಮದಲ್ಲಿ ಮುಖ್ಯವಾಗಿ ರಸ್ತೆ, ನೀರು ಹಾಗು ವಿದ್ಯುತ್‌ನ ಸಮಸ್ಯೆ ಇದ್ದು ಅದನ್ನು ಜಿಲ್ಲಾಧಿಕಾರಿಗಳು ಗ್ರಾಮ ವಾತ್ಸವ್ಯ ಮಾಡಿದ್ದ ಸಂದರ್ಭದಲ್ಲಿ ತಿಳಿಸಿದ್ದೇವೆ. ಅವರಿಂದ ಉತ್ತಮವಾದ ಸ್ಪಂದನೆ ದೊರೆತಿದೆ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಜಿಲ್ಲೆಯ ಎಲ್ಲಾ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದುದ್ದರಿಂದ ಹಲವು ಕಾಮಗಾರಿಗಳು ಪುನರ್ ಆರಂಭಗೊಳ್ಳಲು ಸಹಾಯಕವಾಯಿತು ಜೊತೆಗೆ ಕಂದಾಯ ಇಲಾಖೆಯ ಎಲ್ಲ ಸಮಸ್ಯೆಗಳಿಗೆ ಪರಿಹಾರವೂ ಸಿಕ್ಕಿದಂತಾಗಿದೆ.
ಈ ಹಿಂದೆ ನಮ್ಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಮತ್ತು ನಿರ್ಲಕ್ಷದಿಂದಾಗಿ ನೈಜ ಫಲಾನುಭವಿಗಳಿಗೆ ತಲುಪಬೇಕಾಗಿದ್ದ ಸವಲತ್ತುಗಳು ನೆನೆಗುದಿಗೆ ಬಿದ್ದಿತ್ತು ಎಂದ ಸಂಪನ್ ಅಯ್ಯಪ್ಪ, ನಮ್ಮ ಪಂಚಾಯಿತಿಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು ವೋಲ್ಟೇಜ್ ತುಂಬಾ ಕಡಿಮೆ ಇರುತ್ತದೆ ಆದ್ದರಿಂದ 66kv ವಿದ್ಯುತ್ ಲೈನ್ ಅನ್ನು ಪ್ರತ್ಯೇಕವಾಗಿ ಮೂರ್ನಾಡು ನಾಪೋಕ್ಲು ಮಾರ್ಗವಾಗಿ ಕುಂಜಿಲ-ಕಕ್ಕಬೆಗೆ ತರಲು ಜಿಲ್ಲಾಧಿಕಾರಿಯಿಂದ ಅನುಮತಿ ದೊರೆತಿದೆ, ಇದಕ್ಕಾಗಿ ಎರಡು ಎಕರೆ ಜಾಗವನ್ನು ದಿ ತಾಮರ ಕೂರ್ಗ್ ರೆಸೋರ್ಟ್‌ನವರು ನೀಡುತ್ತಿದ್ದಾರೆ. ಅವರಿ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.
ನಮ್ಮ ಪಂಚಾಯಿತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಜಾಗದ ಸಮಸ್ಯೆಯಿದ್ದು, ಇದೀಗ ಒಂದೂವರೆ ಎಕರೆ ಜಾಗವನ್ನು ದಿ ಫಾರೆಸ್ಟ್ ಸೊಲ್ಯೂಷನ್ ಕಂಪನಿಯವರು ಪಂಚಾಯಿತಿಗೆ ನೀಡುವುದಾಗಿ ತಿಳಿಸಿದ್ದಾರೆ. ಈ ಜಾಗದಲ್ಲಿ ನಾಪೋಕ್ಲು ಹೋಬಳಿ ಮಟ್ಟದ ದೊಡ್ಡ ತ್ಯಾಜ್ಯ ವಿಲೇವಾರಿ ಘಟಕವನ್ನು ತೆರೆಯಲು ಯೋಜನೆಯನ್ನು ಹಾಕಿದ್ದೇವೆ, ಈ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿ ಹಾಗೂ ಘನ ತ್ಯಾಜ್ಯ ವಿಲೇವಾರಿ ಮಾಡುವುದರಿಂದ ಈ ಘಟಕವು ಮುಂದಿನ ದಿನಗಳಲ್ಲಿ ಪಂಚಾಯಿತಿಗೆ ಆದಾಯ ಮೂಲವಾಗಿ ಕಾರ್ಯನಿರ್ವಹಿಸಲಿದೆ ಎಂದರು
ನಮ್ಮ ಪಂಚಾಯಿತಿಯಲ್ಲಿ 70% ಶೇಕಡ ಮನೆಗಳಲ್ಲಿ ಬಾವಿಗಳು ಇದೆ ಹಾಗೂ ಮಳೆಗಾಲದ ಸಂದರ್ಭದಲ್ಲಿ ಗ್ರಾವಿಟಿ ವಾಟರ್ ವ್ಯವಸ್ಥೆಯನ್ನು ಗ್ರಾಮಸ್ಥರು ಉಪಯೋಗಿಸುತ್ತಾರೆ. ಬೇಸಿಗೆಯ ಸಮಯದಲ್ಲಿ ನೀರಿನ ಸಮಸ್ಯೆ ಇದ್ದು, ಇದರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ನಿಂದ 1.75 ಕೋಟಿ ವೆಚ್ಚದ ನೀರಿನ ಕಾಮಗಾರಿ ನಡೆದಿತ್ತು ಆದರೆ ಇದನ್ನು ಪರಿಶೀಲಿಸಿದಾಗ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ತಿಳಿದಿದ್ದರಿಂದ ಈ ಕಾಮಗಾರಿಯನ್ನು ತಡೆಹಿಡಿಯಲಾಗಿದೆ ಎಂದು ಸಂಪನ್ ಅಯ್ಯಪ್ಪ ತಿಳಿಸಿದರು.
ಸ್ವಚ್ಛ ಭಾರತ್ ಮಿಷನ್‌ನ ಮೂಲಕ 90% ಶೇಕಡ ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಿದೆ. ಈ ಹಿಂದೆ ಇದ್ದ ಪಿಡಿಓ ನಿಂದ ಭ್ರಷ್ಟಾಚಾರ ಅಕ್ರಮ ಆಗಿದ್ದ ಕಾರಣವಾಗಿ 100 ಶೇಕಡ ಶೌಚಾಲಯ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಆದರಿಂದ ಮುಂದಿನ ದಿನಗಳಲ್ಲಿ ಬಾಕಿ ಉಳಿದ ಶೌಚಾಲಯಗಳನ್ನು ಪೂರ್ಣ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ಸಂಪನ್ ಅಯ್ಯಪ್ಪ ತಿಳಿಸಿದರು.
ನನ್ನ ಪ್ರಕಾರ ನರೇಗಾ ಯೋಜನೆಯು ಕೊಡಗಿಗೆ ಸೀಮಿತವಾದ ಯೋಜನೆಯಲ್ಲ ಅದರಲ್ಲಿ 10% ಕೆಲಸ ಕೂಡ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸಲು ತುಂಬಾ ಕಷ್ಟಕರವಾಗಿದೆ ಕಾರಣ ಏನೆಂದರೆ ನರೇಗಾ ಯೋಜನೆಯ ಕನಿಷ್ಟ ಕೂಲಿ ₹300 ಆಗಿದ್ದು, ಸದ್ಯ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿಕಾರ್ಮಿಕರ ವೇತನ ಸುಮಾರು ₹700 ಗಳಷ್ಟಿದೆ. ಅಲ್ಲದೆ ಎಸ್ಸಿ ಎಸ್ಟಿ ಮತ್ತು ಬಿಪಿಎಲ್ ಕಾರ್ಡ್ ಸವಲತ್ತು ಪಡೆಯುವ ಜನರ ಬಳಿ ಸ್ವಂತ ಜಾಗ ಬಹಳ ಕಡಿಮೆ ಇದೆ ಇದರಿಂದಾಗಿ ಪೂರ್ಣ ಮಟ್ಟದಲ್ಲಿ ನರೇಗಾ ಯೋಜನೆಯನ್ನು ಅನುಷ್ಟಾನ ಮಾಡಲು ಸಾಧ್ಯವಿಲ್ಲ. ನಮ್ಮ ಜಿಲ್ಲೆಯ ಆರ್ಥಿಕ ವಾತಾವರಣವನ್ನು ಗಮನದಲ್ಲಿ ಇಟ್ಟುಕೊಂಡು ಮೀಸಲಾತಿಯನ್ನು ಪರಿಸ್ಕರಣೆ ಮಾಡಬೇಕಾಗಿದೆ ಎಂದು ಮನವಿ ಮಾಡುತ್ತೇನೆ ಎಂದು ಸಂಪನ್ ಅಯ್ಯಪ್ಪ ಹೇಳಿದರು.
ಸಾಮಾಜಿಕ ಅರಣ್ಯೀಕರಣ ಕೆಲಸವನ್ನು ಶಾಲೆಗಳಿಗೆ ಕೊಡುವ ಬದಲು ರೈತನಿಗೆ ಕೊಡಲಿ ಏಕೆಂದರೆ ಪರಿಸರ ಸಂರಕ್ಷಣೆಯನ್ನು ಹಿಂದಿನ ಕಾಲದಿಂದಲೂ ನಮ್ಮ ಕೊಡಗಿನ ರೈತರು ತುಂಬಾ ಜಾಗರೂಕತೆಯಿಂದ ತಮ್ಮ ಕೃಷಿಯೊಂದಿಗೆ ಅರಣ್ಯ ನಾಶವಾಗದಂತೆ ಜವಾಬ್ದಾರಿಯುತವಾಗಿ ಮಾಡುತ್ತಿದ್ದಾರೆ ಎಂದ ಸಂಪನ್ ಅಯ್ಯಪ್ಪ, ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್, ರಾಜ್ಯ ಸರ್ಕಾರ ಹಾಗೂ PWD ಇಲಾಖೆಯ ಕಾಮಗಾರಿಗಳು ನಡೆಯುತ್ತಿದ್ದು, ಅದರ ಮಾಹಿತಿಯು ಪಂಚಾಯಿತಿಯ ಪಿ.ಡಿ.ಓ. ಗೆ ಲಭಿಸುತ್ತಿಲ್ಲ ಇದರಿಂದ ಪಂಚಾಯಿತಿಗೆ ಅನಾವಶ್ಯಕವಾದ ಕಾಮಗಾರಿ ನಡೆಸುವುದು ಅಥವಾ ಒಂದೇ ಕಾಮಗಾರಿಗೆ ಬೇರೆ ಬೇರೆ ಇಲಾಖೆಯಿಂದ ಹಣ ಮಂಜೂರಾಗಿ ಭ್ರಷ್ಟಾಚಾರಕ್ಕೆ ದಾರಿ ಮಾಡಿ ಕೊಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಆದ್ದರಿಂದಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿದ್ದರೂ ಮೊದಲಿಗೆ ಕಾಮಗಾರಿಗಳ ಮಾಹಿತಿಯ ಆ್ಯಕ್ಷನ್ ಪ್ಲಾನ್ ಅನ್ನು ಪಿಡಿಓ ಗಮನಕ್ಕೆ ತರುವುದು ಒಳಿತು. ಎನ್ನುವುದು ನನ್ನ ಅಭಿಪ್ರಾಯ ಎಂದು ಸಂಪನ್ ಅಯ್ಯಪ್ಪ ತಿಳಿಸಿದರು.
ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ವನ್ಯಪ್ರಾಣಿಗಳ ಉಪಟಳ ಹೆಚ್ಚಾಗಿದೆ ಆನೆ ಹಾವಳಿಯಿಂದ ಗದ್ದೆ ತೋಟಗಳು ಹಾಳಾಗಿದ್ದು, ಜೊತೆಗೆ ಹುಲಿಗಳಿಂದ ದನಕರುಗಳಿಗೆ ತೊಂದರೆಯಾಗುತ್ತಿದೆ ಆದರೆ ಇದಕ್ಕೆ ಸಂಬಂಧಿಸಿದ ಅರಣ್ಯ ಇಲಾಖೆಯು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿಲ್ಲ ಅರಣ್ಯ ಇಲಾಖೆಯು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ ಸಂಪನ್ ಅಯ್ಯಪ್ಪ, ಅದರಲ್ಲು ನಮ್ಮ ಭಾಗಮಂಡಲ ವ್ಯಾಪ್ತಿಯ ಅರಣ್ಯ ಇಲಾಖೆಯು ತುಂಬಾ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಇತ್ತೀಚಿಗೆ ಕೆನ್ನಾಯಿ (ವೈಲ್ಡ್ ಡಾಗ್) ಹಾವಳಿ ಹೆಚ್ಚಾಗಿದೆ, ಎರಡು ತಿಂಗಳಿನಿಂದ ಕಡವೆ ಉಪಟಳವು ಹೆಚ್ಚಾಗಿದೆ ಎಂದರು.
ನಮ್ಮ ಪಂಚಾಯಿತಿಯಲ್ಲಿ 80% ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಿದೆ. ಕಾರಣ… ಕೋರೋನ ಮತ್ತು ಭೂಕುಸಿತ ಪ್ರವಾಹದ ಸಂದರ್ಭದಲ್ಲಿ ಸರಕಾರದಿಂದ ಪಂಚಾಯಿತಿಗೆ ಅಷ್ಟೋಂದು ಸಹಕಾರ ದೊರೆಯಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಂಪನ್ ಅಯ್ಯಪ್ಪ. ಪಂಚಾಯಿತಿಗೆ ರೆಸೋರ್ಟ್ ಹೋಂಸ್ಟೇ, ವ್ಯಾಪಾರ ಮಳಿಗೆ ಹಾಗೂ ಮನೆಗಳ ಕಂದಾಯದಿಂದ ಆದಾಯ ಲಭಿಸುತ್ತಿದೆ ಎಂದರು
ಪಂಚಾಯಿತಿಗಯಲ್ಲಿ ಪಿ.ಡಿ.ಓ ಅವರ ಆಸಕ್ತಿಯಲ್ಲಿ ಸಹಾಯ ಹಸ್ತ ಕೊಠಡಿ ಅಂದರೆ ಬಡವರಿಗೆ ಬಟ್ಟೆ ಹಾಗೂ ಉಪಯುಕ್ತ ಸಾಮಾಗ್ರಿಗಳ ಉಗ್ರಾಣ ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. ನಮ್ಮ ಗ್ರಾಮಕ್ಕೆ ಅಮೃತ ಗ್ರಾಮ ಪಂಚಾಯಿತಿ ಯೋಜನೆ ಅಡಿಯಲ್ಲಿ 25 ಲಕ್ಷ ರೂಪಾಯಿ ಮಂಜೂರಾಗಿದ್ದು,ನಮ್ಮ ಪಂಚಾಯಿತಿ ರಾಷ್ಟ್ರಮಟ್ಟದಲ್ಲಿ ಮಾದರಿ ಪಂಚಾಯಿತಿಯಾಗಿ ಹೆಸರುವಾಸಿಯಾಗಬೇಕೆಂಬುದು ನನ್ನ ಕನಸಾಗಿದೆ ಎಂದ ಕಲಿಯಂಡ ಸಂಪನ್ ಅಯ್ಯಪ್ಪನವರು, ಅದಕ್ಕಾಗಿ ನಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರೊಡಗೂಡಿ ಯಾವುದೇ ಪಕ್ಷ ಭೇದವಿಲ್ಲದೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಶ್ರಮಿಸುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಲಿಯಂಡ ಸಂಪನ್ ಅಯ್ಯಪ್ಪನವರು ರಾಜಕೀಯವಾಗಿ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಪಾಡಿ ಇಗ್ಗುತ್ತಪ್ಪ ದೇವಾಲಯದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಕಕ್ಕಬ್ಬೆ ಹೈಲ್ಯಾಂಡರ್ಸ್ ಕ್ಲಬ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಕೊಡವ ಹಾಕಿ ಅಕಾಡೆಮಿ ನಿರ್ದೇಶಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.
ಮೂಲತಃ ಕೃಷಿಕರು, ಕಾಫಿ ಬೆಳೆಗಾರರು ಹಾಗೂ ಉದ್ಯಮಿಯಾಗಿರುವ ಕಲಿಯಂಡ ಸಂಪನ್ ಅಯ್ಯಪ್ಪನವರು, ತಂದೆ, ಮಾಜಿ ಸೈನಿಕರಾದ ಕಲಿಯಂಡ ಅಪಣ್ಣ, ತಾಯಿ, ಜಾನಕಿ ದಂಪತಿಯ ಮಗನಾಗಿದ್ದಾರೆ. ಪತ್ನಿ, ರಶ್ಮಿ ಗೃಹಿಣಿಯಾಗಿದ್ದಾರೆ. ಹಿರಿಯ ಮಗ, ಕಾರ್ಯಪ್ಪ ಹಾಗೂ ಕಿರಿಯ ಮಗ, ಲಿನಿತ್ ದೇವಯ್ಯ ವ್ಯಾಸಾಂಗ ನಿರತರಾಗಿದ್ದಾರೆ. ಪ್ರಸ್ತುತ ಇವರು ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕಬ್ಬೆ ಗ್ರಾಮದಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಶ್ರೀಯುತರ ಕೌಟುಂಬಿಕ ಜೀವನವು, ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.