ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಗ್ರಾಮದ ಸರ್ವರಿಗೂ ಮೂಲಭೂತ ಸೌಕರ್ಯಗಳು ದೊರಕುವಂತೆ ಮಾಡುವ ನಿಟ್ಟಿನಲ್ಲಿ ನನ್ನ ಪ್ರಯತ್ನ; ಗುಮ್ಮಟ್ಟಿರ ದರ್ಶನ್ ನಂಜಪ್ಪ
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಹಾತೂರು ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರ ಮಡಿಕೇರಿಯಿಂದ 44 ಕಿ.ಮೀ. ದೂರದಲ್ಲಿದೆ. ಪ್ರಸ್ತುತ ಹಾತೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಗುಮ್ಮಟ್ಟಿರ ದರ್ಶನ್ ನಂಜಪ್ಪನವರು ಕಾರ್ಯನಿರ್ವಹಿಸುತ್ತಿದ್ದಾರೆ.
ಹಾತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ಗುಮ್ಮಟ್ಟಿರ ದರ್ಶನ್ ನಂಜಪ್ಪನವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮ ಗ್ರಾಮ” ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಕಲೆ ಹಾಕಲಾಯಿತು.
2001ರಿಂದ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ವ್ಯಾಪಾರೋದ್ಯಮ ನಡೆಸುತ್ತಿದ್ದ ಗುಮ್ಮಟ್ಟಿರ ದರ್ಶನ್ ನಂಜಪ್ಪ ಹಾಗೂ ಇವರ ಹಿರಿಯ ಸಹೋದರ ಗುಮ್ಮಟ್ಟಿರ ಕಿಲನ್ ಗಣಪತಿಯವರು, ಆ ಕಾಲಘಟ್ಟದಲ್ಲಿ ಭಾರತೀಯ ಜನತಾ ಪಾರ್ಟಿಯ ಧುರೀಣರಾಗಿದ್ದ ಸುಜಾಕುಶಾಲಪ್ಪನವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಕ್ರೀಯವಾಗಿ ಪಾಲ್ಗೋಂಡು ಭಾರತೀಯ ಜನತಾ ಪಾರ್ಟಿಗೆ ಬೆಂಬಲವನ್ನು ಸೂಚಿಸುತ್ತಾ ಅಧಿಕೃತವಾಗಿ ರಾಜಕೀಯ ಅಖಾಡಕ್ಕೆ ಧುಮುಕಿದರು.
ಗುಮ್ಮಟ್ಟಿರ ದರ್ಶನ್ ನಂಜಪ್ಪ ಇವರ ಹಿರಿಯ ಸಹೋದರ ಗುಮ್ಮಟ್ಟಿರ ಕಿಲನ್ ಗಣಪತಿಯವರು ಗೋಣಿಕೊಪ್ಪ APMC ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾರೆ. ಈ ಸಂದರ್ಭದಲ್ಲಿ ದರ್ಶನ್ ನಂಜಪ್ಪನವರು ರಾಜಕೀಯ ಕ್ಷೇತ್ರದಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ತದ ನಂತರ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡು ಮುಖ್ಯಭೂಮಿಕೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪ್ಪಯ್ಯನವರ ಸಂಪೂರ್ಣ ಸಹಕಾರದಿಂದ 2015-20ರ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಾ-ಈಚೂರು ವಾರ್ಡಿನಿಂದ ಅವಿರೋಧವಾಗಿ ಆಯ್ಕೆಗೊಂಡ ದರ್ಶನ್ ನಂಜಪ್ಪನವರು, ಆ ವಾರ್ಡಿನ ಬಿ.ಜೆ.ಪಿ. ಬೆಂಬಲಿತ ಓ.ಬಿ.ಸಿ. ಹಾಗೂ ಎಸ್.ಟಿ. ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಆಯ್ಕೆಗೊಳಿಸುವಲ್ಲಿ ಯಶಸ್ವಿಯಾದರು. 2017ರಲ್ಲಿ ಹಾತೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು 2020-25ರ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಪ್ರತಿ ಸ್ಪರ್ಧಿಗಳಿಲ್ಲದೆ ಕುಂದಾ-ಈಚೂರು ವಾರ್ಡಿನಿಂದ ಚುನಾವಣ ಪೂರ್ವ ಅವಿರೋಧವಾಗಿ ಮತದಾನದ ಬೂತ್ ಇಲ್ಲದೆಯೇ ಸರ್ವಾನುಮತದಿಂದ ಆಯ್ಕೆಗೊಂಡರು. ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕೇರಿ ವಾರ್ಡಿನಿಂದ ಅಯ್ಕೆಗೊಂಡ ಕುಪ್ಪಂಡ ಗಿರಿಯವರು ಹಿರಿಯರಾದರಿಂದ ಪಂಚಾಯಿತಿಯ ಮೊದಲ ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈಗ ಮುಂದಿನ ಅವಧಿಗೆ ಗುಮ್ಮಟ್ಟಿರ ದರ್ಶನ್ ನಂಜಪ್ಪನವರು ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಲಜೀವನ್ ಮಿಷನ್ ನಿಂದ ಅತ್ತೂರು-ಕೈಕೇರಿ ಭಾಗದಲ್ಲಿ ಕುಡಿಯುವ ನೀರಿನ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದ ದರ್ಶನ್ ನಂಜಪ್ಪನವರು, ಶಾಸಕರಾದ ಕೆ.ಜಿ. ಬೋಪ್ಪಯ್ಯನವರ ಸಂಪೂರ್ಣ ಸಹಕಾರದಿಂದ 40 ಲಕ್ಷ ಅನುದಾನ ನೀಡಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಮ್ಮ ಪಂಚಾಯಿತಿಯಲ್ಲಿ ಮನೆಮನೆಗೂ ಶೌಚಾಲಯದ ವ್ಯವಸ್ಥೆ ಇದೆ ಎಂದ ದರ್ಶನ್ ನಂಜಪ್ಪನವರು, ಕುಂದ-ಈಚೂರೂ ವಾರ್ಡಿನ ಬಸವೇಶ್ವರ ಬಡಾವಣೆಯ 116 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗಿದೆ ಎಂದರು. ತಲಾ 3.50 ಲಕ್ಷದಂತೆ 116 ಫಲಾನುಭವಿಗಳಿಗೆ ಮನೆ ನಿರ್ಮಿಸಲು ಅನುದಾನ ದೊರೆಯುತ್ತಿದ್ದು, ITDP ವತಿಯಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಯು ಶಾಸಕರಾದ ಕೆ.ಜಿ. ಬೋಪ್ಪಯ್ಯನವರ ಮುತುವರ್ಜಿಯಿಂದ ಇದೀಗ ಪ್ರಗತಿಯ ಹಂತದಲ್ಲಿದೆ ಎಂದು ತಿಳಿಸಿದರು.
ಕಸ ವಿಲೇವಾರಿ ಕುರಿತು ಮಾಹಿತಿ ನೀಡಿದ ದರ್ಶನ್ ನಂಜಪ್ಪನವರು, ಘನತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಕಸ ವಿಲೇವಾರಿ ಮಾಡುವ ಘಟಕವನ್ನು ಪಂಚಾಯಿತಿಯ ಹಿಂಭಾಗದಲ್ಲಿ 15ಲಕ್ಷ ವೆಚ್ಚದಲ್ಲಿ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಇಲ್ಲದ ಸ್ಥಳೀಯ ಗ್ರಾಮ ವಾಸಿಗಳಿಗೆ ನಿವೇಶನ ಹಾಗೂ ವಸತಿ ನೀಡುವ ನಿಟ್ಟಿನಲ್ಲಿ ಶ್ರಮ ವಹಿಸಲಾಗಿದೆ ಎಂದ ದರ್ಶನ್ ನಂಜಪ್ಪ, ಉತ್ತಮವಾದ ರಸ್ತೆ ಚರಂಡಿ ವ್ಯವಸ್ಥೆ ಶೇಕಡ 70%ರಷ್ಟು ಕೆಲಸ ಮುಗಿದಿದ್ದು, ಉಳಿದ ಕೆಲಸಗಳಿಗೆ ಎಂ.ಎಲ್.ಎ, ಎಂ.ಎಲ್.ಸಿ. ಎಂ.ಪಿ.ಗಳ ಅನುದಾನ ದೊರಕಿಸಿಕೊಂಡು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಗ್ರಾಮದ ಸರ್ವರಿಗೂ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಮುಂತಾದ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ದೊರಕುವಂತೆ ಮಾಡುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವುದಾಗಿ ತಿಳಿಸಿದ ದರ್ಶನ್ ನಂಜಪ್ಪ, ಸರ್ಕಾರದಿಂದ ಜನತೆಗೆ ದೊರೆಯುತ್ತಿರುವ ಯೋಜನೆಗಳ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವುದಾಗಿ ತಿಳಿಸಿದ ಇವರು ಸರ್ವರೂ ಸುಭಿಕ್ಷರಾಗಿ ಬಾಳಬೇಕೆಂದು ನಾನು ಬಯಸುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಯುವಜನರು ರಾಜಕೀಯವಾಗಿ ಯಾವುದೇ ಪಕ್ಷಕ್ಕೆ ಸೇರ್ಪಡೆ ಆಗುವ ಮೊದಲ ಸ್ವಯಂ ತನ್ನ ಪಾತ್ರದ ಬಗ್ಗೆ ಅವಲೋಕನ ಮಾಡಬೇಕು ಎಂದ ದರ್ಶನ್ ನಂಜಪ್ಪ, ಅರ್ಥಪೂರ್ಣ ಜೀವನವನ್ನು ಹುಡುಕುತ್ತಿರುವ ಇಂದಿನ ಯುವಕರು ಜೀವನದ ಧ್ಯೇಯವನ್ನು ಕಂಡುಹಿಡಿಯಲು ಸ್ವಯಂ-ಅನ್ವೇಷಣೆಯ ಪ್ರಯಾಣವನ್ನು ಕೈಗೊಂಡು ತನ್ನಿಂದ ಸಮಾಜಕ್ಕೆ ಏನು ಕೊಡುಗೆ ನೀಡಬಹುದು, ಏನು ಮಾಡಲು ಸಾಧ್ಯ ಎಂಬುದನ್ನು ಮನಗಾಣಬೇಕು ಎಂದು ಯವಶಕ್ತಿಗೆ ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ತಿಳಿಸಿದರು.
ಗುಮ್ಮಟ್ಟಿರ ದರ್ಶನ್ ನಂಜಪ್ಪನವರು ರಾಜಕೀಯವಾಗಿ ಕುಂದ-ಈಚೂರು ಗ್ರಾಮದ ಬಿಜೆಪಿಯ ಬೂತ್ ಅಧ್ಯಕ್ಷರಾಗಿ ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕವಾಗಿ ಗೋಣಿಕೊಪ್ಪಲಿನ ಆರ್.ಎಂ.ಸಿ. ಯ ಅಡಿಕೆ ವರ್ತಕರ ಸಂಘದ ಸದಸ್ಯರಾಗಿದ್ದಾರೆ. ಧಾರ್ಮಿಕವಾಗಿ ಕುಂದ-ಈಚೂರು ಪಡುವೇರಿ ದಬ್ಬೇಚ್ಚಮ್ಮ ದೇವಾಲಯದ ನಿರ್ದೇಶಕರಾಗಿರುತ್ತಾರೆ. ಶೈಕ್ಷಣಿಕವಾಗಿ ಕುಂದಾ ಶಾಲೆಯ SDMC ಸದಸ್ಯರಾಗಿರುತ್ತಾರೆ.
ಮೂಲತಃ ಕೃಷಿಕರು, ಕಾಫಿ ಬೆಳೆಗಾರರು ಹಾಗೂ ಉದ್ಯಮಿಯಾಗಿರುವ ಗುಮ್ಮಟ್ಟಿರ ದರ್ಶನ್ ನಂಜಪ್ಪನವರು ತಂದೆ ಗುಮ್ಮಟ್ಟಿರ ಸೋಮಯ್ಯ, ತಾಯಿ ಶಾಂತಿ ಸೋಮಯ್ಯ ದಂಪತಿಗಳ ಕಿರಿಯ ಪುತ್ರರಾಗಿದ್ದಾರೆ. ಪತ್ನಿ ಸ್ನೇಹ ನಂಜಪ್ಪ ಗೃಹಿಣಿಯಾಗಿದ್ದು, ಮಗಳು ರಾಘವಿ ನಂಜಪ್ಪ ವ್ಯಾಸಂಗ ನಿರತರಾಗಿದ್ದಾರೆ. ಇವರ ಹಿರಿಯ ಸಹೋದರ ಗುಮ್ಮಟ್ಟಿರ ಕಿಲನ್ ಗಣಪತಿಯವರು ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಕಾರ್ಯಕರ್ತರಾಗಿದ್ದು ಕೃಷಿಕರು, ಕಾಫಿ ಬೆಳೆಗಾರರು ಹಾಗೂ ಉದ್ಯಮಿಯಾಗಿದ್ದಾರೆ.
ಪ್ರಸ್ತುತ ಗುಮ್ಮಟ್ಟಿರ ದರ್ಶನ್ ನಂಜಪ್ಪನವರು ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಈಚೂರು ಗ್ರಾಮದಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಶ್ರೀಯುತರ ಕೌಟುಂಬಿಕ ಜೀವನವು, ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
https://www.searchcoorg.com/hathuru/