ನಾಪೋಕ್ಲು : ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ವಿದ್ಯಾರ್ಥಿ ಹಾಗೂ ಇಬ್ಬರು ಶಿಕ್ಷಕರಿಗೆ ಗಂಭೀರ ಗಾಯಗಳಾದ ಘಟನೆ ನಾಪೋಕ್ಲು ಮೂರ್ನಾಡು ಮುಖ್ಯರಸ್ತೆಯ ಬೊಳಿ ಬಾಣೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ನಾಪೋಕ್ಲುವಿನ ಅಂಕುರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೈಹಿಕಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮಹೇಶ್ ಹಾಗೂ ವಿನೋದ್ ಎಂಬುವವರು ನಾಪೋಕ್ಲು ಕಡೆಯಿಂದ ಮೂರ್ನಾಡು ಕಡೆಗೆ ದ್ವಿಚಕ್ರವಾಹನದಲ್ಲಿ ಸಂಚರಿಸುವಾಗ ಮೂರ್ನಾಡು ಕಡೆಯಿಂದ ನಾಪೋಕ್ಲುವಿಗೆ ಬರುತ್ತಿದ್ದ ಸ್ವಿಫ್ಟ್ ಕಾರಿನ ನಡುವೆ ಬೊಳಿಬಾಣೆ ಎಂಬಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಶಿಕ್ಷಕ ಮಹೇಶ್ ಮತ್ತು ವಿನೋದ್ ಹಾಗೂ ಶಿಕ್ಷಕ ಮಹೇಶ್ ಅವರ ಪುತ್ರಿಯ ಕಾಲಿಗೆ ಗಂಭೀರ ಗಾಯಗಳಾಗಿದ್ದು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ದ್ವಿಚಕ್ರ ವಾಹನ ಹಾಗೂ ಕಾರಿನ ಮುಂಭಾಗ ಜಖಂ ಗೊಂಡಿದೆ. ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ: ಝಕರಿಯ ನಾಪೋಕ್ಲು