ಕೊಡವಾಮೆರ ಕೊಂಡಾಟ ಸಂಘಟನೆಯ ಬಾಳೋಪಾಟ್‌ರ ಬಂಬಂಗ ಮತ್ತು ದಿ. ಮಾತಂಡ ಮೊಣ್ಣಪ್ಪ ನೆನಪಿನ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ…
ಕೊಡವಾಮೆರ ಕೊಂಡಾಟ ಸಂಘಟನೆಯು ನಡೆಸುವ ಕೊಡವ ಒಕ್ಕಗಳ ನಡುವಿನ ಬಾಳೋಪಾಟ್ ಸ್ಪರ್ಧೆ, ಮತ್ತು ಅಖಿಲ ಕೊಡವ ಸಮಾಜ ಮಾಜೀ ಅಧ್ಯಕ್ಷ ದಿ. ಮಾತಂಡ ಮೊಣ್ಣಪ್ಪ ಅವರ ನೆನಪಿಗೆ ನಡೆಸಿದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಮತ್ತು ಬಾಳೋಪಾಟ್ ತಜ್ಞರ ಸಭೆಯು ದಿನಾಂಕ 30/11/2023ನೇ ಗುರುವಾರ ಮಡಿಕೇರಿಯ ಬಾಲಭವನದಲ್ಲಿ ನಡೆಯಲಿದೆ.
ಕೊಡವಾಮೆರ ಕೊಂಡಾಟ ಸಂಘಟನೆಯ ಸ್ಥಾಪಕ ಮತ್ತು ಅಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11.30ಕ್ಕೆ ಪ್ರಾರಂಭವಾಗುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಅಖಿಲಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ, ಶಾಸಕ ಮಂಡೆಪಂಡ ಸುಜಾ ಕುಶಾಲಪ್ಪ, ಮಾಜೀ ಸಚಿವ ಮೇರಿಯಂಡ ನಾಣಯ್ಯ, ಸ್ಪರ್ಧೆಯ ಬಹುಮಾನ ದಾನಿಗಳಾದ ಸರ್ಕಂಡ ಸೋಮಯ್ಯ, ಶ್ರೀಮತಿ ಮಲ್ಲೇಂಗಡ ಸುಧಾಮುತ್ತಣ್ಣ, ಅಂಜಪರವಂಡ ರಂಜು ಮುತ್ತಪ್ಪ, ಹಂಚೆಟ್ಟಿರ ಮನುಮುದ್ದಪ್ಪ ಸೇರಿದಂತೆ ಹಿರಿಯ ಜಾನಪದ ತಜ್ಞರು ಭಾಗವಹಿಸುವರು.
ಕೊಡವ ಜನಾಂಗದ ಮೂಲ ಇತಿಹಾಸದ ಆಧಾರವಾಗಿರುವ ಬಾಳೋಪಾಟ್‌ನ ವಾಸ್ತವತೆಯ ಅರಿವನ್ನ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಸಬೇಕಾದರೆ, ಬಾಳೋ ಪಾಟ್ ಉಳಿಯುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತೀ ಕೊಡವ ಕುಟುಂಬದ ಪ್ರತೀ ಸದಸ್ಯರೂ ಬಾಳೋಪಾಟ್ ಅರಿಯಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಬಾಳೋಪಾಟ್ ಪೈಪೋಟಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಆಯೋಜನೆ ಮಾಡಲು ಅಂದು ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಬಾಳೋಪಾಟ್ ಅರಿವಿರುವ ಅಭಿಮಾನ ಇರುವ ಎಲ್ಲರನ್ನು ಮುಕ್ತವಾಗಿ ಸ್ವಾಗತಿಸುತ್ತಾ, ಎಲ್ಲಾ ಕೊಡವ ಸಮಾಜ, ಸಂಘಟನೆಗಳು ಮತ್ತು ತಜ್ಞರಿಗೆ ಪ್ರತ್ಯೇಕ ಪತ್ರದ ಮೂಲಕ ಆವ್ಹಾನಿಸಲಾಗಿದೆ. ಪತ್ರ ದೊರೆಯದವರು ಕೂಡ ಸಭೆಗೆ ಬಂದು ಮುಕ್ತ ಅಭಿಪ್ರಾಯ ಮಂಡಿಸಲು ಅವಕಾಶ ವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೊಡವಾಮೆರ ಕೊಂಡಾಟ ಸಂಘಟನೆ ಕೋರಿದೆ.