ಪ್ರಖ್ಯಾತ ಮೂಳೆ ತಜ್ಞರಾದ (ಆರ್ಥೋಪೆಡಿಕ್) ಡಾ. ಕೆ. ರವಿ ಅಪ್ಪಾಜಿ

ಮಡಿಕೇರಿಯ ಕಾಲೇಜು ರಸ್ತೆಯಲ್ಲಿರುವ ರವಿ ಆರ್ಥೋಪೆಡಿಕ್ ಸೆಂಟರ್ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ. ಡಾ. ರವಿ ಅಪ್ಪಾಜಿ ಅವರು ಇಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಮೂಳೆ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾ ಸೇವೆಗಳನ್ನು ಒದಗಿಸುತ್ತಿದ್ದಾರೆ. ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜಿನಲ್ಲಿ ಆರ್ಥೋಪೆಡಿಕ್ ಸರ್ಜರಿಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಡಾ. ಅಪ್ಪಾಜಿ, ಹಲವು ಹೆಸರಾಂತ ಆಸ್ಪತ್ರೆಗಳೊಂದಿಗೆ ಸಂದರ್ಶಕ ಸಲಹೆಗಾರರಾಗಿ ತಮ್ಮ ಪರಿಣತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಡಾ. ರವಿ ಅಪ್ಪಾಜಿ ಅವರು ತಮ್ಮ ವೈದ್ಯಕೀಯ ಪದವಿಯನ್ನು ಮಣಿಪಾಲದ ಪ್ರತಿಷ್ಠಿತ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಪಡೆದರು. 1990 ರಲ್ಲಿ ಅದೇ ಸಂಸ್ಥೆಯಲ್ಲಿ ಮೂಳೆ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿಯನ್ನು ಗಳಿಸಿದರು. ಅಮೇರಿಕನ್ ಅಕಾಡೆಮಿ ಆಫ್ ಆರ್ಥೋಪೆಡಿಕ್ ಸರ್ಜನ್ಸ್ (ಎಎಒಎಸ್) ಸಂಸ್ಥೆಯ ಸದಸ್ಯರಾಗಿರುವ ಅವರು, ಭಾರತೀಯ ಆರ್ಥೋಪೆಡಿಕ್ ಅಸೋಸಿಯೇಷನ್ ಮತ್ತು ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್‌ನ ಆಜೀವ ಸದಸ್ಯರೂ ಹೌದು. ಈ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಡಾ. ರವಿ ಅಪ್ಪಾಜಿ ಅವರ ಸೇವೆ ಕೇವಲ ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅವರು ಮಾನವೀಯ ವಿಚಾರಗಳಲ್ಲಿ ಅಚಲ ಬದ್ಧತೆಯನ್ನು ಹೊಂದಿದ್ದು, ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ನಿರ್ದೇಶಕರಾಗಿ ಅವರ ಕೊಡುಗೆ ಅಪಾರ. ಮರ್ಕರಾ ಡೇರಿಯನ್ (ಸಿಟಿ, ಯುಎಸ್‌ಎ) ಅಸೋಸಿಯೇಷನ್‌ನ ಆಜೀವ ಸದಸ್ಯರಾಗಿ, ತಮ್ಮ ಸಮರ್ಥ ಸಾಂಸ್ಥಿಕ ಕೌಶಲ್ಯಗಳ ಮೂಲಕ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಉತ್ತೇಜಿಸುತ್ತಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಅವರ ಅನುಭವ ವ್ಯಾಪಕವಾಗಿದೆ. 1991 ರಿಂದ 2003ರ ಅವಧಿಯಲ್ಲಿ ಮತ್ತು 1991 ರಲ್ಲಿ, ಅಮೆರಿಕಾದಲ್ಲಿ ತೀವ್ರ ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಾ ವೀಕ್ಷಕರಾಗಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ವಿವಿಧ ದೇಶಗಳ ಮೂಳೆ ಶಸ್ತ್ರಚಿಕಿತ್ಸಕರು ಹಾಗೂ ಕ್ರೀಡಾ ಗಾಯಾಳು ಕೇಂದ್ರಗಳೊಂದಿಗೆ ಕೆಲಸ ಮಾಡಿದ ಅನುಭವ ಅವರಿಗಿದೆ. ಯುಎಸ್‌ಎ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಕೆ, ಜರ್ಮನಿ, ಸ್ವಿಟ್ಸರ್ಲೆಂಡ್, ಇಟಲಿ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಆಯೋಜಿಸಲಾದ ಅನೇಕ ವೈದ್ಯಕೀಯ ಸಮಾವೇಶ ಹಾಗೂ ಸಮ್ಮೇಳನಗಳಲ್ಲಿ ಭಾಗವಹಿಸಿ, ಜಾಗತಿಕ ವೈದ್ಯಕೀಯ ಪ್ರಗತಿಯೊಂದಿಗೆ ತಮ್ಮ ಜ್ಞಾನವನ್ನು ನವೀಕರಿಸಿಕೊಂಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಸ್ಥೆ, ಕೊಡಗಿನ ಮುಖ್ಯಸ್ಥರಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ, 85ಕ್ಕೂ ಹೆಚ್ಚು ಸಿಎಂಇ (Continuing Medical Education) ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ವೈದ್ಯಕೀಯ ಸೇವೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು, ಕಳೆದ 20 ವರ್ಷಗಳಿಂದ ದೈಹಿಕ ಅಂಗವಿಕಲ ರೋಗಿಗಳಿಗೆ ಉಚಿತವಾಗಿ ವೈದ್ಯಕೀಯ ಸೇವೆ ಒದಗಿಸುತ್ತಿದ್ದಾರೆ. ಅಂಗವಿಕಲರ ಸೇವೆಗೆ ವಿಶೇಷ ಆಸಕ್ತಿ ವಹಿಸುವ ಅವರು, ಪೋಲಿಯೊ ನಿರ್ಮೂಲನೆ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಕೃತಕ ಅಂಗಗಳನ್ನು ಒದಗಿಸಲು ಹಲವಾರು ಉಚಿತ ಶಿಬಿರಗಳನ್ನು ನಡೆಸಿದ್ದು, ಜೈಪುರ ಕಾಲು ಅಳವಡಿಕೆ, ಮೂಳೆ ಖನಿಜ ಸಾಂದ್ರತೆ ಶಿಬಿರ ಸೇರಿದಂತೆ ವಿವಿಧ ಮೂಳೆ ಮತ್ತು ವೈದ್ಯಕೀಯ ಶಿಬಿರಗಳು, ಹಾಗೂ ರೋಟರಿ ಪಾಸಿಟಿವ್ ಹೆಲ್ತ್ ಸ್ಟಾಪ್-ಎನ್‌ಸಿಡಿ ಶಿಬಿರಗಳನ್ನು ಆಯೋಜಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರ ಈ ಅಸಾಧಾರಣ ಸೇವೆ-ಸಾಧನೆಗಳನ್ನು ಗುರುತಿಸಿ, ಪ್ರತಿಷ್ಠಿತ ಮಣಿಪಾಲ್ ವಿಶ್ವವಿದ್ಯಾಲಯವು 2011 ರಲ್ಲಿ ‘ಡಿಸ್ಟಿಂಗ್ವಿಶ್ಡ್ ಅಲುಮ್ನಿ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಡಾ. ರವಿ ಅಪ್ಪಾಜಿ ಅವರು ರೋಟರಿ ಸಂಸ್ಥೆಗೆ ನೀಡಿದ ಕೊಡುಗೆ ಸ್ಮರಣೀಯ. 1991 ರಲ್ಲಿ ಅಮೆರಿಕಾದ ಕನಾಸ್ ರೋಟರಿಗೆ ಭೇಟಿ ನೀಡಿದ ನಂತರ, 1991ರ ಜುಲೈ ತಿಂಗಳಿನಿಂದ ರೋಟೇರಿಯನ್ ಆಗಿ ಸಮುದಾಯ ಸೇವಾ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಅಂತಾರಾಷ್ಟ್ರೀಯ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. 1998 ರಲ್ಲಿ ಮಡಿಕೇರಿಯಲ್ಲಿ ಆಯೋಜಿತ ರೋಟರಿ ಸಮ್ಮೇಳನದ ಕಾರ್ಯದರ್ಶಿಯಾಗಿದ್ದರು. 2002-03 ನೇ ಇಸವಿಯಲ್ಲಿ ಸಹಾಯಕ ಗವರ್ನರ್ ಆಗಿ, ರೆಗ್ ರೋಟರಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದ್ದಾರೆ.
2002 ರಲ್ಲಿ ಜಿಎಸ್‌ಜಿ ತಂಡದ ನಾಯಕರಾಗಿ ಆರ್‌ಐಡಿ 7890 ಯುಎಸ್‌ಎಗೆ ಭೇಟಿ ನೀಡಿದರು. 2009-10 ರಲ್ಲಿ ಆರ್‌ಐಡಿ 3180 ರೋಟರಿ ಸಂಸ್ಥೆಯ ಡಿಸ್ಟ್ರಿಕ್ಸ್ ಗವರ್ನರ್ ಹುದ್ದೆಯನ್ನು ಅಲಂಕರಿಸಿದರು. ಈ ಮಹತ್ವದ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುವುದರ ಮೂಲಕ ಅವರು ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರರಾದರು. ತಮ್ಮ ಅಧಿಕಾರಾವಧಿಯಲ್ಲಿ ರೋಟರಿ ಸಂಸ್ಥೆಯಲ್ಲಿ ಯಶಸ್ವಿ ಕಾರ್ಯಚಟುವಟಿಕೆಗಳನ್ನು ಆಯೋಜಿಸಿ, 1 ಮಿಲಿಯನ್ ಡಾಲರ್‌ಗಳೊಂದಿಗೆ ಮೌಲೇಂಡಿ ಕಾಲುವೆಯನ್ನು ನಿರ್ಮಿಸಿ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಅಲ್ಲದೆ, ತಮ್ಮ ಅವಧಿಯಲ್ಲಿ ಮಡಿಕೇರಿಯಲ್ಲಿ ರೋಟರಿ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಿದ್ದರು, ಇದರಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. 2014-15 ನೇ ಸಾಲಿನಲ್ಲಿ ರೋಟರಿ 3180 ಜಿಲ್ಲೆಯಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದರು.
2016 ರಲ್ಲಿ ಕೌನ್ಸಿಲ್ ಆನ್ ಲೆಜಿಸ್ಟ್ರೇಶನ್ (ಸಿಒಎಲ್) ಜಿಲ್ಲಾ ಪ್ರತಿನಿಧಿಯಾಗಿ ಚುನಾಯಿತರಾಗಿ ರೋಟರಿ 3181 ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಅವರ ನಿರಂತರ ಪ್ರಯತ್ನದ ಫಲವಾಗಿ 2016 ರಲ್ಲಿ ಎಎಲ್ (Annual Legislature) ನಲ್ಲಿ ರನ್ ಉತ್ತರ ಜಿಲ್ಲಾ ಶಾಸನವನ್ನು ಯಶಸ್ವಿಯಾಗಿ ಅಂಗೀಕರಿಸಲಾಯಿತು. 2016-17 ನೇ ಸಾಲಿನಲ್ಲಿ ರೋಟರಿ 3181 ಜಿಲ್ಲಾ ತರಬೇತುದಾರರಾಗಿ ಜವಾಬ್ದಾರಿ ನಿರ್ವಹಿಸಿದರು. 2014, 2019 ಮತ್ತು ಹಾಂಬರ್ಗ್‌ಗಳಲ್ಲಿ ಆಯೋಜಿತ ವಿವಿಧ ರೋಟರಿ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. 2016 ರಲ್ಲಿ ಆಯೋಜಿತ ದುಬೈನ ಇನ್ಸಿಟ್ಯೂಟ್‌ನ ಸಹ ಅಧ್ಯಕ್ಷರಾಗಿದ್ದರು. 2020 ರಲ್ಲಿ ಕೋಲ್ಕತ್ತಾದಲ್ಲಿ ಆಯೋಜಿಸಿದ್ದ ಪ್ರಮೋಷನ್ ಚೇರ್ ಸೆಂಟಿನಿಯಲ್ ಸನ್ನಿಟ್‌ನಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು. 2019 ರಲ್ಲಿ ಕೌಲಾಲಂಪುರ್‌ನಲ್ಲಿ ತರಬೇತಿ ನಾಯಕರ ತಂಡದ ಸಹ ಅಧ್ಯಕ್ಷರಾಗಿದ್ದರು. 2019 ರಲ್ಲಿ ಇಂದೋರ್ ಸಂಸ್ಥೆ ಆಯೋಜಿಸಿದ್ದ ವೈದ್ಯಕೀಯ ಮತ್ತು ಜಿಲ್ಲಾ ಸಂಯೋಜಕರ ಸಮ್ಮೇಳನದ ಉಪಾಧ್ಯಕ್ಷರಾಗಿದ್ದರು. 2019-21 ನೇ ಸಾಲಿನಲ್ಲಿ ರೂಪಿತ ಪ್ರಾಜೆಕ್ಟ್ ಪಾಸಿಟಿವ್ ಹೆಲ್ತ್ ರಾಷ್ಟ್ರೀಯ ಸಮಿತಿ ಸದಸ್ಯರಾಗಿದ್ದರು. ಅದೇ ವರ್ಷ ಇ-ಲರ್ನಿಂಗ್ ರಾಷ್ಟ್ರೀಯ ಸಮಿತಿ ಸದಸ್ಯರಾಗಿದ್ದರು. ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ಅತ್ಯುನ್ನತ ಗೌರವವಾದ ‘ಸ್ವಯಂ ಸೇವೆಗಿಂತ ಹೆಚ್ಚು’ ಪ್ರಶಸ್ತಿಗೆ 2017-18 ನೇ ಸಾಲಿನಲ್ಲಿ ಭಾಜನರಾಗಿದ್ದಾರೆ. ರೋಟರಿ ಸಂಸ್ಥೆಯ ‘ಸ್ವತಃ ಸೇವೆಯೇ ಶ್ರೇಷ್ಠ’ ಎಂಬ ಧೈಯವಾಕ್ಯದ ನಿಜವಾದ ಸಾಕಾರಕ್ಕಾಗಿ ವ್ಯಕ್ತಿಗೆ ನೀಡುವ ಪ್ರತಿಷ್ಠಿತ ಗೌರವಕ್ಕೆ ಡಾ. ರವಿ ಅಪ್ಪಾಜಿ ಪಾತ್ರರಾಗಿದ್ದಾರೆ.
2018 ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ, ಸಂತ್ರಸ್ತರಿಗೆ ನೆರವಿನ ಮಹಾಪೂರವೇ ಹರಿದು ಬಂದಿತ್ತು. ಡಾ. ರವಿ ಅಪ್ಪಾಜಿ ಅವರು ಪ್ರಾಜೆಕ್ಟ್ ಚೇರ್ಮನ್ ಆಗಿ, ರೋಟರಿ ಸಂಸ್ಥೆ ಮೂಲಕ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಮಹತ್ತರ ಕಾರ್ಯಕ್ಕೆ ಕೈಜೋಡಿಸಿದರು. ತಲಾ 5.05 ಲಕ್ಷ ರೂಪಾಯಿ ವೆಚ್ಚದಲ್ಲಿ (ಒಟ್ಟು 2.56 ಕೋಟಿ ರೂಪಾಯಿ) 50 ಮನೆಗಳನ್ನು ಎರಡು ಹಂತಗಳಲ್ಲಿ ನಿರ್ಮಿಸಿ ಸಂತ್ರಸ್ತರಿಗೆ ವಿತರಿಸಲಾಯಿತು. ಅಲ್ಲದೆ, 98,900 ವಿದ್ಯಾರ್ಥಿಗಳಿಗೆ ತಲುಪುವ ಮೂಲಕ ರೋಟರಿ 3181 ಜಿಲ್ಲಾ ವ್ಯಾಪ್ತಿಯ 60 ಶಾಲೆಗಳಲ್ಲಿ 3 ರಿಂದ 8 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸಾಕ್ಷರತಾ ತರಬೇತಿಯನ್ನು ನೀಡಲು ಸಹಕರಿಸಿದ್ದಾರೆ.
2019 ರಲ್ಲಿ ಹ್ಯಾಬಿಟಾಟ್ ಫಾರ್ ಹ್ಯುಮಾನಿಟಿ ಇಂಡಿಯಾ ಸಲಹಾ ಮಂಡಳಿ ಅಧ್ಯಕ್ಷೆ ರಾಜಶ್ರೀ ಬಿರ್ಲಾ ಅವರಿಂದ ‘ಲೀಡರ್‌ಶಿಪ್ ಬಿಲ್ಡರ್’ ಪ್ರಶಸ್ತಿ ಸ್ವೀಕರಿಸಿದರು. 2021 ರಿಂದ 2024 ರವರೆಗೆ ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಾಗಿ ರೋಟರಿ ಫೌಂಡೇಶನ್ ರಚಿಸಿದ ರೋಟರಿ ಇಂಟರ್‌ನ್ಯಾಷನಲ್ ಕೇಡರ್ ಆಫ್ ಟೆಕ್ನಿಕಲ್ ಅಡ್ವೈಸರ್‌ನಲ್ಲಿ ಕಾರ್ಯನಿರ್ವಹಿಸಿದರು. 2024ರ ಫೆಬ್ರವರಿಯಲ್ಲಿ ರೋಟರಿ 3142, ನವಿ ಮುಂಬೈಗೆ ರೋಟರಿ ಅಂತಾರಾಷ್ಟ್ರೀಯ ಅಧ್ಯಕ್ಷರ ಪ್ರತಿನಿಧಿಯಾಗಿ ತೆರಳಿದ್ದರು. 2023-24 ನೇ ಅವಧಿಗೆ ರೋಟರಿ 3181 ಗೆ ಸಲಹೆಗಾರರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಡಾ. ರವಿ ಅಪ್ಪಾಜಿ ಅವರು ಕೊಡಗಿನ ಪ್ರಖ್ಯಾತ ವೈದ್ಯರಾಗಿದ್ದ ಡಾ. ಕೆ. ಕೆ. ಅಪ್ಪಾಜಿ ಅವರ ಪುತ್ರರು. ಹೀಗಾಗಿ, ಅವರು ಹೆಸರಾಂತ ವೈದ್ಯರ ಕುಟುಂಬಕ್ಕೆ ಸೇರಿದವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈದ್ಯಕೀಯ ಸೇವೆಯ ಜೊತೆಗೆ, ಕಾಫಿ ಬೆಳೆಗಾರರೂ ಆಗಿರುವ ಡಾ. ರವಿ ಅಪ್ಪಾಜಿ ಅವರು ಕೊಡಗಿನಲ್ಲಿರುವ ಪ್ರತಿಷ್ಠಿತ ಕಪಾಲಿ ಎಸ್ಟೇಟ್‌ನ ಮಾಲೀಕರಾಗಿದ್ದಾರೆ.
ಅವರ ಪತ್ನಿ ಪೂರ್ಣಿಮಾ ಅವರು ಎಂಬಿಎ, ಬಿಕಾಂ ಪದವೀಧರರಾಗಿದ್ದು, ಇನ್ನರ್‌ವೀಲ್ ಜಿಲ್ಲಾಧ್ಯಕ್ಷೆಯಾಗಿ ಸಮಾಜ ಸೇವೆ ಸಲ್ಲಿಸಿದ್ದಾರೆ. ಡಾ. ರವಿ ಅಪ್ಪಾಜಿ-ಪೂರ್ಣಿಮಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಇಬ್ಬರೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.
- • ಪುತ್ರ ಡಾ. ಜೀವನ್ ರವಿ ಎಂಬಿಬಿಎಸ್, ಎಂಎಸ್ ಆರ್ಥೋಪೆಡಿಕ್ಸ್, ಫೆಲೋಶಿಪ್ ಆರ್ತ್ರೋಪ್ಲಾಸ್ಟಿ/ಆರ್ಥ್ರೋಸ್ಕೋಪಿ (ಸಕ್ರಾ ವರ್ಲ್ಡ್ ಹಾಸ್ಪಿಟಲ್) ಪಡೆದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
- • ಪುತ್ರಿ ಡಾ. ವರ್ಷ ರವಿ ಬಿಡಿಎಸ್, ಎಂಡಿಎಸ್ ಎಂಡೋಡಾಂಟಿಕ್ಸ್ (ಮಣಿಪಾಲ್) ಪಡೆದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ರವಿ ಅಪ್ಪಾಜಿ ಅವರು ಪ್ರಮುಖ ದಾನಿಯಾಗಿದ್ದು, ಪಾಲ್ ಹ್ಯಾರಿಸ್ ಸೊಸೈಟಿಯ ಸದಸ್ಯರಾಗಿದ್ದಾರೆ. ಕಾಫಿ ಮಾರ್ಕೆಟಿಂಗ್, ಷೇರು ಮತ್ತು ಸ್ಟಾಕ್ ಮಾರ್ಕೆಟ್ ಅವರ ಆಸಕ್ತಿ ಕ್ಷೇತ್ರಗಳಾಗಿವೆ. ವೈದ್ಯಕೀಯ, ಸಾಮಾಜಿಕ ಮತ್ತು ವೃತ್ತಿಪರ ಕಾರ್ಯಗಳ ಜೊತೆಗೆ, ಟೇಬಲ್ ಟೆನ್ನಿಸ್ ಮತ್ತು ಕ್ರಿಕೆಟ್ ಆಟಗಾರರಾಗಿದ್ದು, ಚೆಸ್, ಗಾಲ್ಫ್, ಸಂಗೀತವನ್ನು ಇಷ್ಟಪಡುವ ಹವ್ಯಾಸಗಳನ್ನು ಹೊಂದಿದ್ದಾರೆ. ಡಾ. ರವಿ ಅಪ್ಪಾಜಿ ಅವರ ಜೀವನವು ಸೇವೆ, ಜ್ಞಾನ ಮತ್ತು ಸಮುದಾಯದ ಬದ್ಧತೆಗೆ ಒಂದು ಉತ್ತಮ ಉದಾಹರಣೆಯಾಗಿದೆ.