ಮಡಿಕೇರಿ ದಸರಾ 2025: ಐತಿಹಾಸಿಕ ಸಂಭ್ರಮಕ್ಕೆ ಸೆಪ್ಟೆಂಬರ್ 22ರಂದು ಚಾಲನೆ
ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ 2025ರ ಸೆಪ್ಟೆಂಬರ್ 22ರ ಸೋಮವಾರದಂದು ವಿಧ್ಯುಕ್ತ ಚಾಲನೆ ದೊರೆಯಲಿದೆ. ಮಡಿಕೇರಿ ನಗರದ ಪ್ರಮುಖ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಪಂಪಿನಕೆರೆ ಬಳಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೆರವಣಿಗೆ ಆರಂಭಿಸುವ ಮೂಲಕ ಈ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಈ ಬಾರಿ ಒಟ್ಟು 11 ದಿನಗಳ ಕಾಲ ಈ ದಸರಾ ಜನೋತ್ಸವವು ನಡೆಯಲಿದೆ.
ಮಡಿಕೇರಿಯ ನಾಲ್ಕು ಶಕ್ತಿದೇವತೆಗಳಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿ, ಪವರ್‌ಹೌಸ್ ಬಳಿಯ ದಂಡಿನ ಮಾರಿಯಮ್ಮ ಮತ್ತು ಪೆನ್ಶನ್‌ಲೇನ್ ಬಳಿಯ ಕೋಟೆ ಮಾರಿಯಮ್ಮ ದೇವಾಲಯಗಳಿಂದ ಕರಗಗಳು ಹೊರಡುತ್ತವೆ. ಪಂಪಿನಕೆರೆ ಬಳಿ ದಸರಾ ಸಮಿತಿಯಿಂದ ಕರಗಗಳಿಗೆ ಪೂಜೆ ಸಲ್ಲಿಸುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ.
ಮೈಸೂರು ದಸರಾದ ಪ್ರಮುಖ ಆಕರ್ಷಣೆ ಆನೆ ಅಂಬಾರಿಗಳ ಮೆರವಣಿಗೆಯಾದರೆ, ಮಡಿಕೇರಿ ದಸರಾದಲ್ಲಿ ದಶಮಂಟಪಗಳ ಶೋಭಾಯಾತ್ರೆಯೇ ಹೆಚ್ಚು ಗಮನ ಸೆಳೆಯುತ್ತದೆ. ಮೈಸೂರಿನಲ್ಲಿ ಹಗಲು ದಸರಾ ನಡೆದರೆ, ಮಡಿಕೇರಿಯಲ್ಲಿ ರಾತ್ರಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಮಂಟಪಗಳ ಶೋಭಾಯಾತ್ರೆ ಆರಂಭವಾಗುತ್ತದೆ.
ಮಂಜಿನ ನಗರಿ ಮಡಿಕೇರಿಯಲ್ಲಿ ವಿಜಯದಶಮಿಯ ರಾತ್ರಿ ದೇವಲೋಕವೇ ಧರೆಗಿಳಿದ ಅನುಭವವನ್ನು ನೀಡುತ್ತದೆ. ಕಣ್ಮನ ಸೆಳೆಯುವ ವಿದ್ಯುತ್ ದೀಪದ ಅಲಂಕಾರ, ಸಿಂಹಗಳು ಮತ್ತು ಹುಲಿಗಳ ಘರ್ಜನೆ, ರಕ್ಕಸರ ಅಟ್ಟಹಾಸ ಮತ್ತು ದೇವಾನುದೇವತೆಗಳ ಹೂಂಕಾರದಂತಹ ದೃಶ್ಯಗಳು ಲಕ್ಷಾಂತರ ಜನರ ಮನಸ್ಸಿಗೆ ಮುದ ನೀಡುತ್ತವೆ.