Pete Sri Rama mandira
Reading Time: 2 minutes ಮಡಿಕೇರಿ ನಗರದ ಕಾಲೇಜು ರಸ್ತೆ ಮತ್ತು ಹಿಲ್ ರಸ್ತೆ ಸೇರುವ ನಗರದ ಹೃದಯ ಭಾಗದಲ್ಲಿ ಕಂಗೊಳಿಸುವ ದೇಗುಲವೇ ಶ್ರೀ ಪೇಟೆ ರಾಮಮಂದಿರ. ಇದರ ಇತಿಹಾಸವು ಮಡಿಕೇರಿ ದಸರಾದೊಂದಿಗೆ ಬೆಸೆದುಕೊಂಡಿದೆ. ಸುಮಾರು 185 ವರ್ಷಗಳ ಹಿಂದೆ ಮಡಿಕೇರಿಯಲ್ಲಿ ತಲೆದೋರಿದ್ದ ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಕರಗಗಳನ್ನು ಹೊರಡಿಸುವ ನಿರ್ಧಾರವನ್ನು ಧಾರ್ಮಿಕ ಮುಖಂಡರು ಕೈಗೊಂಡರು. ಊರ ಹೊರಗಿರುವ ಶಕ್ತಿ ದೇವತೆಗಳನ್ನು ಊರ ಒಳಗೆ ಕರೆದು ನಗರ ಪ್ರದಕ್ಷಿಣೆ ಮಾಡಿಸುವುದು ಕ್ರಮಬದ್ಧವಾಗಿರಬೇಕು , ಪೌರಾಣಿಕ ಹಿನ್ನಲೆಯಿಂದ ಕೂಡಿರಬೇಕು ಎಂಬ ಭಾವನೆ ಮೂಡಿತು. ಆಗ ಪಾರ್ವತಿಯು ದುಷ್ಟ ಸಂಹಾರಕ್ಕೆ ಮುನ್ನ ಮೊದಲಿಗೆ ಅಣ್ಣನೆನಿಸಿಕೊಂಡ ಶ್ರೀ ಮಹಾ ವಿಷ್ಣುವಿನ ಬಳಿಗೆ ಹೋಗುವ ಪೌರಾಣಿಕ ಘಟನೆಯನ್ನು ಹಿನ್ನಲೆಯಾಗಿರಿಸಿಕೊಂಡು ಪಾರ್ವತಿಯ ಅಂಶವೆನಿಸಿಕೊಂಡಿರುವ ನಾಲ್ಕು ಶಕ್ತಿ ದೇವತೆಗಳನ್ನು ಊರೊಳಗೆ ಮಹಾವಿಷ್ಣುವಿನ ಸ್ಥಾನಕ್ಕೆ ಬರ ಮಾಡಿಕೊಳ್ಳುವ ಕ್ರಮ ವಿಧಿಗಳನ್ನು ರೂಪಿಸಲಾಯಿತು. ಆಗಿನ ಕಾಲದಲ್ಲಿ ನಗರದಲ್ಲಿ ಮಹಾವಿಷ್ಣ್ಣುವಿಗೆ ಸಂಬಂಧಿಸಿದ ಯಾವುದೇ ಪೂಜಾ ಸ್ಥಳವಿರದ ಕಾರಣ ನಗರದ ದೊಡ್ಡಪೇಟೆಯಲ್ಲಿ ಪೂಜಾ ಸ್ಥಳವೊಂದನ್ನು ನಿರ್ಮಿಸಿ ರಾಮನ ಚಿತ್ರವನ್ನಿಟ್ಟು ಪೂಜಿಸಲಾಯಿತು. ಅಲ್ಲದೆ ನವರಾತ್ರಿ ಸಂದರ್ಭ ಕರಗ ದೇವತೆಗಳು ಇಲ್ಲಿಗೆ ಆಗಮಿಸಿ ರಾಮ (ಅರ್ಥಾತ್ ಮಹಾವಿಷ್ಣು) ನಿಗೆ ಪೂಜೆ ಸಲ್ಲಿಸಿ ತಮ್ಮ ನಗರ ಪ್ರದಕ್ಷಿಣೆ ಕಾರ್ಯವನ್ನು ಆರಂಭಿಸಿದವು. ಈ ಸಂಪ್ರದಾಯವು 185 ವರ್ಷ ಕಳೆದರು ಇಂದಿಗೂ ಹಾಗೆಯೇ ಮುಂದುವರೆಯುತ್ತಾ ಬಂದಿದೆ. ಹೀಗೆ ದಸರಾ ಉತ್ಸವ ಆಚರಣೆಗೆಂದು ನಿರ್ಮಾಣವಾದ ರಾಮದೇಗುಲವು ಕ್ರಮೇಣ ಪ್ರಸಿದ್ಧಿ ಪಡೆಯುತ್ತಾ ಬಂದಿತು. ಪ್ರಸ್ತುತ ಶ್ರೀ ರಾಮಮಂದಿರದಲ್ಲಿ ಪೂಜಾ ಕಾರ್ಯಗಳು, ಭಜನೆ, ಸಮಾರಂಭಗಳು ಜರುಗುತ್ತಿರುತ್ತವೆ.. ಹಳೆಯದಾಗಿದ್ದ ಪೇಟೆ ಶ್ರೀರಾಮಮಂದಿರ ದೇವಾಲಯವು ಇದೀಗ ಜೀರ್ಣೋದ್ಧಾರಗೊಂಡು ಸುಂದರವಾಗಿದೆ.