ಶ್ರೀ ರಾಜರಾಜೇಶ್ವರಿ ಕ್ಷೇತ್ರ, ಮಂಗಳಾದೇವಿ ನಗರ, ಮಡಿಕೇರಿ-ಕೊಡಗು
ಇತಿಹಾಸ – ಹಿನ್ನಲೆ
ಪ್ರಕೃತಿ ರಮಣೀಯ ಸೌಂದರ್ಯ ಸಿರಿಯ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ಮಂಜಿನ ನಗರಿಯೆಂದೇ ಪ್ರಸಿದ್ದ.. ಈ ನಗರವು ಶಕ್ತಿ ದೇವತೆಗಳ ನೆಲೆಬೀಡು. ಅಂತೆಯೇ ಮಡಿಕೇರಿಯ ಮಂಗಳದೇವಿ ನಗರಕ್ಕೆ ಐತಿಹಾಸಿಕ ಹಿನ್ನಲೆ ಇದೆ. ಸಾವಿರಾರು ವರ್ಷಗಳ ಹಿಂದೆ ಶ್ರೀ ರಾಜರಾಜೇಶ್ವರಿ ಈ ಕ್ಷೇತ್ರದ ದೇವತೆಯಾಗಿದ್ದಳು, ಕಾಲಾಂತರದಲ್ಲಿ ಈ ಕ್ಷೇತ್ರ ಪ್ರಕೃತಿ ವಿಕೋಪಕ್ಕೆ ಒಳಗಾಗಿ ಭಗ್ನಗೊಂಡು ಸುತ್ತ ಮುತ್ತಲಿನ ನಿವಾಸಿಗಳು ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುವಂತಾಯಿತು. ಪ್ರಸ್ತುತವೂ ಈ ಪ್ರದೇಶದಲ್ಲಿರುವ ಕಷ್ಟ ಕಾರ್ಪಣ್ಯ , ನಷ್ಟ ತೊಂದರೆಗಳಿಗೆ ಪರಿಹಾರಕ್ಕಾಗಿ ಅಷ್ಟಮಂಗಲ ಸ್ವರ್ಣಪ್ರಶ್ನೆಯ ಬಗ್ಗೆ ಚಿಂತಿಸಲಾಯಿತು. ದಿನಾಂಕ 23-12-2012 ರಂದು ಜ್ಯೋತಿಷ್ಯ ತಿಲಕರಾದ ಶ್ರೀ ಶಶಿಧರ ಅವರ ನೇತೃತ್ವದಲ್ಲಿ ಇರಿಸಲಾದ ಅಷ್ಟಮಂಗಲ ಪ್ರಶ್ನೆಯಲ್ಲಿ ಶ್ರೀ ರಾಜರಾಜೇಶ್ವರಿ ದೇವಾಲಯ ವಿಚಾರವು ಕಂಡುಬಂದಿರುತ್ತದೆ.
ಅದರಂತೆ ಪುರಾತನ ಕಾಲಘಟ್ಟದಲ್ಲಿ ಕೊಡಗು ರಾಜ್ಯವನ್ನು ಆಳಿದ ರಾಜನಿಗೆ ರಾಜಕಾರ್ಯ ನಿರ್ವಹಿಸಲು ಹಾಗೂ ಬರವನ್ನು ಎದುರಿಸಲು ಕಷ್ಟ ಉಂಟಾಯಿತೆಂದೂ , ಅದಕ್ಕಾಗಿ ರಾಜನು ದೇವರ ಮೊರೆ ಹೋದಾಗ ಅತೀ ಶ್ರೇಷ್ಠರಾದ ಸಂನ್ಯಾಸಿಯೊಬ್ಬರು ಪ್ರತ್ಯಕ್ಷರಾಗಿ, ರಾಜ್ಯದ ಕಷ್ಟ ನಿವಾರಣೆಗಾಗಿ ಶ್ರೀ ರಾಜರಾಜೇಶ್ವರಿ ದೇವಿಯ ಆಲಯ ನಿರ್ಮಾಣ ಮಾಡಬೇಕೆಂದೂ, ಅದಕ್ಕಾಗಿ ಶ್ರೇಷ್ಠ ಬೀಜಾಕ್ಷರಗಳಿರುವ ʼಶ್ರೀಚಕ್ರʼವನ್ನು ನೀಡಿ, ಆ ʼಶ್ರೀಚಕ್ರʼ ಮೇಲೆ ದೇವರ ಪಾಣಿಪೀಠ ಹಾಗೂ ಬಿಂಬ ನಿರ್ಮಾಣ ಮಾಡಬೇಕೆಂದು ಹೇಳಿ ಕ್ಷಣಮಾತ್ರದಲ್ಲಿ ಅದೃಶ್ಯರಾದರು. ಅದರಂತೆ ರಾಜನು ಶ್ರೀ ರಾಜರಾಜೇಶ್ವರಿ ದೇವಾಲಯ ನಿರ್ಮಾಣ ಮಾಡಿದನೆಂದೂ, ತದನಂತರ ರಾಜ್ಯವು ಸುಭಿಕ್ಷವಾಗಿತ್ತೆಂದೂ ತಿಳಿದುಬಂದಿರುತ್ತದೆ. ದೇವಿಯು ರಾಜನಿಗೆ ಅರಮನೆಯಲ್ಲಿ ಲಕ್ಷ್ಮಿಯಾಗಿಯೂ, ಯುದ್ದ ಕ್ಷೇತ್ರದಲ್ಲಿ ಜಯಕಾಳಿಯಾಗಿಯೂ, ಭಕ್ತ ಜನರಿಗೆ ಶಕ್ತಿ ಸ್ವರೂಪಿಣಿಯಾಗಿಯೂ ಪ್ರದೇಶದ ಎಲ್ಲ ಭಕ್ತ ಜನರನ್ನು ಅನುಗ್ರಹಿಸಿ ಅವರ ಕಷ್ಟ ಸಂಕಷ್ಟಗಳನ್ನು ದೂರೀಕರಿಸಿ ಪೊರೆಯುವ ಮಹಾ ಚೈತನ್ಯವಾಗಿದ್ದಾಳೆಂದೂ ತಿಳಿದು ಬಂದಿರುತ್ತದೆ.
ಅನಂತರದ ಕಾಲಘಟ್ಟದಲ್ಲಿ ಪ್ರಕೃತಿ ವಿಕೋಪಕ್ಕೆ ಒಳಗಾಗಿ ನಾಶವಾದ ದೇವಾಲಯದಲ್ಲಿ ಈ ಮಹಾನ್ ಜಗನ್ಮಾತೆಯ ಆರಾಧನೆ ಅಪೂರ್ಣವಾದ್ದರಿಂದ ಈ ಪ್ರದೇಶಕ್ಕೆ ಎಲ್ಲಾ ರೀತಿಯ ದೋಷ ಸಂಭವಿಸಿ, ದುರಂತಗಳು ಹಾಗೂ ಅನೇಕ ರೀತಿಯ ಕಷ್ಟ ನಷ್ಟಗಳು ಬಾಧಿಸುತ್ತದೆ ಎಂದು ಕಂಡು ಬಂದಿರುತ್ತದೆ. ಹಾಗಾಗಿ ಐತಿಹಾಸಿಕ ಶ್ರೀ ರಾಜರಾಜೇಶ್ವರಿ ಕ್ಷೇತ್ರವನ್ನು ಸಂಪೂರ್ಣವಾಗಿ ಪುನರ್ ನಿರ್ಮಾಣ ಮಾಡಬೇಕೆಂದು ಕಂಡುಬಂದಿರುತ್ತದೆ.
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ʼಶ್ರೀಚಕ್ರʼ ದ ಮೇಲೆ ಸಿಂಹಾಸನಾರೂಢ ಚರ್ತುಭುಜಧಾರಿಣಿ ದೇವಿಯ ವಿಗ್ರಹ ಪ್ರತಿಷ್ಠಾಪಿಸಲ್ಪಡಬೇಕೆಂದೂ, ಈ ಸನ್ನಿದಿಯಲ್ಲಿ ಜಗನ್ಮಾಥೆ ಶ್ರೀ ರಾಜರಾಜೇಶ್ವರಿಗೆ ನಿತ್ಯ ಪೂಜೆಗೆ ಬೇಕಾದ ನೈವೇಧ್ಯ ಕೊಠಡಿ, ತೀರ್ಥ ಮಂಟಪ, ತೀರ್ಥ ಬಾವಿ ಇತ್ಯಾದಿಯಾಗಿ ಸುಸಜ್ಜಿತ ʼಶಿಲಾಗುಡಿʼ ನಿರ್ಮಾಣದೊಂದಿಗೆ, ಗೋಪುರಕ್ಕೆ ತಾಮ್ರದ ಹೊದಿಗೆ ಅಳವಡಿಸುವಂತೆಯೂ, ಜೊತೆಯಲ್ಲಿ ಈ ಕ್ಷೇತ್ರದಲ್ಲಿ ನೈರುತ್ಯಭಾಗದಲ್ಲಿ ಗಣಪತಿ ಹಾಗೂ ಪಶ್ಚಿಮ ನೈರುತ್ಯ ಭಾಗದಲ್ಲಿ ನಾಗಪ್ರತಿಷ್ಠೆಯನ್ನು ಮಾಡಿ, ಸುಬ್ರಮಣ್ಯ ದೇವರ ಸಂಕಲ್ಪವನ್ನು ಆ ಮೂಲಕವಾಗಿ ಕಂಡಿಕೊಳ್ಳುವ ಸಲಹೆ ಬಂದಿದೆ.
ಈ ರೀತಿಯಲ್ಲಿ ನಿರ್ಮಾಣವಾಗುವ ದೇವಾಲಯದಲ್ಲಿ ಶ್ರೀ ರಾಜರಾಜೇಶ್ವರಿಯು, ಮಹಾಕಾಳಿ-ಮಹಾಲಕ್ಷ್ಮಿ-ಮಹಾಸರಸ್ವತಿ ರೂಪದಲ್ಲಿ ಐಕ್ಯಸ್ವರೂಪಿಣಿಯಾಗಿ ಮೆರೆಯುವಳೆಂದೂ, ಈ ತಾಯಿಯ ಆರಾಧನೆಯಿಂದ ಶತ್ರುಭಾಧೆ ನಿವಾರಣೆಯೊಂದಿಗೆ ಭಕ್ತರಿಗೆ ಇಷ್ಟಾರ್ಥಗಳು ಸಿದ್ಧಿಯಾಗಲಿದ್ದು, ಸಂಪತ್ತು ಸಮೃದ್ಧಿಯ ಜೀವನದೊಂದಿಗೆ ಸುಭಿಕ್ಷೆ ಪಾಲಿಸುವ ಮಹಾನ್ ಶಕ್ತಿಯಾಗಿ ನೆಲೆಯೂರುವಳು ಎಂದು ತಿಳಿದುಬಂದಿದೆ.
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿರುವ ರೀತಿಯಲ್ಲಿ ಶ್ರೀ ಕ್ಷೇತ್ರದ ನಿರ್ಮಾಣ ಕಾರ್ಯ ವಾಸ್ತುಶಿಲ್ಪಿ ಶ್ರೀ ನಳಿಲುಮನೆ ವ್ಯಾಸರಾಯ ಆಚಾರ್ಯರ ಮಾರ್ಗದರ್ಶನದಲ್ಲಿ ಪೂರ್ಣಗೊಂಡಿದ್ದು , ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಾಲಯದ ಶ್ರೀ ಸುಬ್ರಮಣ್ಯ ತಂತ್ರಿಗಳ ನೇತೃತ್ವದಲ್ಲಿ ಶ್ರೀ ರಾಜರಾಜೇಶ್ವರಿ, ಶ್ರೀ ಮಹಾಗಣಪತಿ ಹಾಗೂ ಶ್ರೀ ನಾಗ ದೇವರುಗಳ ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಾಶಾಭಿಷೇಕ ಮಹೋತ್ವವವು ದಿನಂಕ 12-1-2021ನೇ ಮಂಗಳವಾರದಿಂಧ 18-1-2021 ನೇ ಸೋಮವಾರದವರೆಗೆ ನಡೆಸಲಾಯಿತು.

ಇತಿಹಾಸ ಹಿನ್ನಲೆ





ಸ್ವಾಗತ ಸಮಿತಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
