Nvarathri Events



ಈ ದೇಗುಲವು ನಗರದ ಮಾರುಕಟ್ಟೆಯಿಂದ ಉತ್ತರಕ್ಕೆ ಕಾಲ್ನಡಿಗೆ ದೂರದಲ್ಲಿದೆ. ಮಡಿಕೇರಿಯ ತೋಟಗಾರಿಕಾ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಚ್.ನಿಂಗಪ್ಪ ಎಂಬುವರು ಸ್ಥಳೀಯ ಯುವಕರ ಗುಂಪನ್ನು ಕಟ್ಟಿಕೊಂಡು ಸಮಿತಿಯೊಂದನ್ನು ರಚಿಸಿ, ದಾನಿಗಳ ನೆರವಿನಿಂದ 1977 ರಲ್ಲಿ ಈ ದೇಗುಲವನ್ನು ನಿರ್ಮಿಸಿದರು. ಮೊದಲಿಗೆ ಶ್ರೀ ರಾಮನ ಚಿತ್ರಪಟವನ್ನು ಇಟ್ಟು ಪೂಜೆ ಮಾಡಲಾಗುತ್ತಿತ್ತು. ಇದನ್ನು ನಿಂಗಪ್ಪನವರೇ ನಿರ್ವಹಿಸುತ್ತಿದ್ದರು. ದೇಗುಲಕ್ಕೆ ಮೂರ್ತಿಯು ಬೇಕೆನಿಸಿದಾಗ ಹತ್ತಾರು ಕಡೆ ಅಲೆದು ಕೊನೆಗೆ ಮೈಸೂರು ಅರಮನೆ ಸಮೀಪವಿರುವ ಹಾಲ್ನಳ್ಳಿಯ ಶಿಲ್ಪಿಗಳಿಂದ ಸುಂದರವಾದ ಕೋದಂಡಧಾರಿರಾಮ ಜೊತೆಗೆ ಸೀತಾ ಮಾತೆ, ಲಕ್ಷ್ಮಣ ಮತ್ತು ಆಂಜನೇಯ, ಅಲ್ಲದೆ ವಿನಾಯಕನ ವಿಗ್ರಹವನ್ನು ಕೃಷ್ಣಶಿಲೆಯಿಂದ ನಿರ್ಮಿಸಿ ತರಲಾಯಿತು. ಅದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಸಹಕಾರವಿತ್ತು. ದೇವತಾ ವಿಗ್ರಹಗಳ ಪ್ರತಿಷ್ಠಾಪನೆಯು ವಿಜ್ರಂಭಣೆÉಯಿಂದ ನೆರವೇರಿತು. ಇದೇ ಸಂದರ್ಭದಲ್ಲಿ ದೇವಾಲಯದ ವತಿಯಿಂದ ದಸರಾ ಮಂಟಪವನ್ನು ಹೊರಡಿಸಲು ನಿರ್ಧರಿಸಲಾಯಿತು. ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿದ್ದ ನಿಂಗಪ್ಪನವರು ದೇವಸ್ಥಾನವನ್ನು ಸಾರ್ವಜನಿಕರÀ ಹೆಸರಿನಲ್ಲಿ ನೋಂದಾಯಿಸಿ ಹಾಗೆಯೇ ಆಡಳಿತವನ್ನು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶ್ರೀ ರಾಮ ಸೇವಾ ಸಮಿತಿಯವರಿಗೆ ವಹಿಸಿಕೊಟ್ಟರು. ನವಗ್ರಹ ಮೂರ್ತಿಗಳನ್ನೂ ಹೊಂದಿರುವ ದೇಗುಲವು ಸುಂದರವಾಗಿದೆ. ರಾಮನವಮಿ, ನವರಾತ್ರಿ, ಮುಂತಾದ ಉತ್ಸವಗಳನ್ನು ವಿಜ್ರಂಭಣೆಯಿಂದ ಇಲ್ಲಿ ಆಚರಿಸಲಾಗುತ್ತದೆ.

ಈ ದೇವಾಲಯವು ಮಡಿಕೇರಿಯ ಗೌಳಿ ಬೀದಿಯಲ್ಲಿದ್ದು, ಸೌಮ್ಯ ಸ್ವರೂಪಿಣಿಯಾದ ಕಂಚಿಕಾಮಾಕ್ಷಿದೇವಿಯೂ, ಉಗ್ರ ಸ್ವರೂಪಿಣಿಯಾದ ಮುತ್ತು ಮಾರಿಯಮ್ಮ ದೇವಿಯನ್ನು ಈ ದೇವಸ್ಥಾನದಲ್ಲಿ ಪ್ರತ್ಯೇಕವಾಗಿ ಗರ್ಭಗುಡಿಯನ್ನು ನಿರ್ಮಿಸಿ ಪ್ರತಿಷ್ಠಾಪಿಸಲಾಗಿದೆ. ಶಕ್ತಿ ದೇವಿಗಳಲ್ಲಿ ಒಂದಾಗಿರುವ ಶ್ರೀ ಕಂಚಿಕಾಮಾಕ್ಷಿ ದೇವಿಯು ಪ್ರಜೆಗಳ ಕಷ್ಟ-ಕಾರ್ಪಣ್ಯಗಳ ನಿವಾರಕಿಯೆನಿಸಿಕೊಂಡಿದ್ದಾಳೆ. ಕೈಯಲ್ಲಿ ಗಿಣಿಯನ್ನು ಹಿಡಿದುಕೊಂಡಿರುವುದು ಈ ಶಾಂತ ಸ್ವರೂಪಿಣಿಯ ವೈಶಿಷ್ಟತೆ. ಈ ಪುರಾತನ ದೇಗುಲವು ಕಾಲಾಂತರದಿಂದ ಹಲವಾರು ಮಾರ್ಪಾಟುಗಳನ್ನು ಹೊಂದುತ್ತಾ ಬಂದು ಪ್ರಸ್ತುತ ನಗರದ ಬೃಹತ್ ದೇವಾಲಯಗಳಲ್ಲಿ ಒಂದೆನಿಸಿದೆ. ಗರ್ಭಗುಡಿಯಲ್ಲಿ ಪುರಾತನ ಮೂಲ ವಿಗ್ರಹವಿದೆ. ನವೀಕರಣಗೊಂಡಿರುವ ಬೃಹತ್ ದೇಗುಲಕ್ಕೆ ವಿಶಿಷ್ಟವಾದ ರಾಜಗೋಪುರ ನಿರ್ಮಾಣವಾಗಿದೆ. ಈ ರಾಜಗೋಪುರ ಹೊಯ್ಸಳ ಶೈಲಿಯಲ್ಲಿದೆ. ಈ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಠಮಿ, ಅಯ್ಯಪ್ಪ ಸ್ವಾಮಿ ಪೂಜೆಗಳು ನಡೆಯುತ್ತದೆ. ನವರಾತ್ರಿಯಂದು ಕರಗವನ್ನು ಹೊರಡಿಸುತ್ತಾರೆ. ನಂತರ ಕುಂಭ ಪೂಜೆ, ಶಾಂತಿ ಪೂಜೆಗಳು ನಡೆಯುವದರ ಜೊತೆಗೆ ಏಪ್ರಿಲ್ ತಿಂಗಳಲ್ಲಿ ಮಾರಿಯಮ್ಮ ಉತ್ಸವ ಪೂಜೆಯನ್ನು ವಿಜ್ರಂಭಣೆಯಿಂದ ಆಚರಿಸುತ್ತಾರೆ. ಇಲ್ಲಿ ವ್ಯತ್ಯಾಸವೆಂದರೆ ಮಾರಿಯಮ್ಮ ಕರಗವನ್ನು ಹೂವಿನ ಬದಲು ಬೇವಿನ ಎಲೆಯಿಂದ ಅಲಂಕರಿಸಲಾಗುತ್ತದೆ. ಈ ದೇವಾಲಯದ ಪೂಜೆಯನ್ನು ಗೌಳಿ (ಯಾದವ) ಜನಾಂಗದವರು ನೆರವೇರಿಸುತ್ತಾರೆ.