ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿದೇಶ ಕಂಡ ಅಪ್ರತಿಮ ವೀರ ಸೇನಾನಿ, ಈ ನಾಡಿನ ಕಣ್ಮಣಿ ಜನರಲ್ ಕೊಡಂದೇರ ಎಸ್ ತಿಮ್ಮಯ್ಯನವರ ಪುತ್ಥಳಿ ವಿಘ್ನಗೊಳ್ಳುವ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯಕ್ಕೆ ನೋವಾಗಿದೆ, ಪ್ರತಿಮೆ ಮರುಸ್ಥಾಪನೆಗೆ ಹೆಚ್ಚಿನ ಕಾಲಾವಕಾಶ ತೆಗೆದು ಕೊಳ್ಳದೆ ಕೂಡಲೇ ಇದೇ ಜಾಗದಲ್ಲಿ ಜನರಲ್ ಕೆ.ಎಸ್ ತಿಮ್ಮಯ್ಯನವರ ಪುತ್ಥಳಿ ಪುನರ್ನಿರ್ಮಾಣ ಮಾಡುವ ಮೂಲಕ ತಿಮ್ಮಯ್ಯ ವೃತ್ತವನ್ನು ಹೊಸ ವಿನ್ಯಾಸದೊಂದಿಗೆ ಮರುನಾಮಕರಣ ಮಾಡಬೇಕು ಎಂದು ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗಸಂಸ್ಥೆಗಳು ಒತ್ತಾಯಿಸಿದೆ.
ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಇದರ ಸತ್ಯಾಸತ್ಯತೆಯ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಕೆ ಎಸ್ ಆರ್ ಟಿ ಬಸ್ ಇರಲಿ ಅಥವಾ ಬೇರೆ ಯಾವುದೇ ವಾಹನಗಳೇ ಇರಲಿ ಈ ಜಾಗದಲ್ಲಿ ವೇಗದ ಮಿತಿಯನ್ನು ನಿಯಂತ್ರಣಗೊಳಿಸಬೇಕು, ಇಲ್ಲಿ ಮೇಲ್ನೋಟಕ್ಕೆ ಚಾಲಕನ ಅಜಾಗರೂಕತೆ ಎದ್ದು ಕಾಣುತ್ತಿದೆ, ಈ ವೃತ್ತಕ್ಕೆ ನಾಲ್ಕೈದು ಭಾಗದಿಂದ ವಾಹನಗಳು ಬಂದು ಸೇರುವ ಮುಖ್ಯ ವೃತ್ತವಾಗಿದ್ದು ಇಲ್ಲಿ ವೇಗದ ಮಿತಿಯನ್ನು ನಿಯಂತ್ರಣಗೊಳಿಸಬೇಕಿತ್ತು, ಚಾಲಕ ಏನಾದರೂ ಅಜಾಗರೂಕತೆಯಿಂದ ವಾಹನ ಚಾಲಿಸಿದ್ದರೆ ಆತನ ಮೇಲೆ ಕ್ರಮ ಜರುಗಿಸುವಂತಾಗಬೇಕು ಎಂದು ಒತ್ತಾಯಿಸಿದೆ.
ಮಡಿಕೇರಿ ಹೃದಯ ಭಾಗದಲ್ಲಿರುವ ಜನರಲ್ ತಿಮ್ಮಯ್ಯ ವೃತ್ತ ಮಡಿಕೇರಿ ನಗರದ ಮುಕುಟವಿದ್ದಂತೆ, ತಿಮ್ಮಯ್ಯನವರ ಪ್ರತಿಮೆ ಇಲ್ಲದ ಮಡಿಕೇರಿಯನ್ನು ಊಹಿಸಲು ಅಸಾಧ್ಯ. ಪ್ರತಿಮೆ ಸ್ಥಾಪನೆಯಾಗಿ 50 ವರ್ಷ ತುಂಬುವ ಹೊತ್ತಿನಲ್ಲಿಯೇ ಈ ರೀತಿಯ ದುರ್ಘಟನೆ ನಡೆದಿರುವುದು ತುಂಬಾ ನೋವು ತಂದಿದೆ. ಯಾವುದೇ ಕಾರಣಕ್ಕೂ ಪ್ರತಿಮೆಯ ಜಾಗವನ್ನು ಆದಲು ಬದಲು ಮಾಡದೆ ಇದೇ ಜಾಗದಲ್ಲಿ ಕೂಡಲೆ ಇನ್ನಷ್ಟು ಸುಂದರವಾಗಿ ವೃತ್ತವನ್ನು ನಿರ್ಮಿಸಿ ಪ್ರತಿಮೆಯನ್ನು ಅನಾವರಣ ಮಾಡಬೇಕಿದೆ. ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳದೆ ಸರ್ಕಾರ ಕೂಡಲೆ ಇದಕ್ಕೆ ಬೇಕಾಗಿರುವ ಆರ್ಥಿಕ ಮೂಲವನ್ನು ಬಿಡುಗಡೆ ಮಾಡುವ ಮೂಲಕ ವೃತ್ತ ಪುನರ್ನಿರ್ಮಾಣ ಮಾಡುವ ಮೂಲಕ ಪ್ರತಿಮೆ ನಿರ್ಮಾಣದ 50 ವರ್ಷದ ಸಂಭ್ರಮವನ್ನು ಅದ್ಧೂರಿಯಿಂದ ಮಾಡಬೇಕಿದೆ. ಪ್ರತಿಮೆ ಮರುಸ್ಥಾಪನೆಗೆ ಮೀನಾಮೇಷ ಎಣಿಸಿದಲ್ಲಿ ಎಲ್ಲಾ ಜನಾಂಗವನ್ನು ಒಗ್ಗೂಡಿಸಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.