ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಪಿ. ಎ. ಹನೀಫ್, ಎಲ್ಲ ವರ್ಗದವರನ್ನು ಸಮಾನವಾಗಿ ಗೌರವಿಸುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು ಪ್ರಜಾಪ್ರಭುತ್ವ ವಿಶ್ವಾಸಿಗಳ ಅಪೇಕ್ಷೆಯಾಗಿತ್ತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಎಲ್ಲಾ ಹಂತದ ಜನಪ್ರತಿನಿಧಿಗಳು ಅಭಿವೃದ್ಧಿಯನ್ನೇ ಮೂಲ ಮಂತ್ರವಾಗಿಸಬೇಕು. ವಿಶೇಷವಾಗಿ ಜನಪ್ರತಿನಿಧಿಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತುವಂತಾಗಬೇಕು. ಅಧಿಕಾರದಲ್ಲಿದ್ದಾಗ ಮಾಡಿದ ಪ್ರಾಮಾಣಿಕ ಜನಸೇವೆ ಅಧಿಕಾರ ಕೊನೆಗೊಂಡ ನಂತರವೂ ಜನರ ಹೃದಯದಲ್ಲಿ ಸ್ಮರಣೀಯವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪಂದಿಕಂಡ ದಿನೇಶ್, ಶಾಸನ ಬದ್ಧ ಅಧಿಕಾರದಿಂದ ಜನಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಹುದು. ಅಧಿಕಾರವಿದ್ದಾಗ ಜನರ ಬೇಡಿಕೆಗಳಿಗೆ ಸ್ಪಂದಿಸುವುದು ತುಂಬ ಸುಲಭ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಚುನಾಯಿತ ಜನಪ್ರತಿನಿಧಿಗಳು ಚಿಂತಿಸುವಂತಾಗಬೇಕು. ಅಧಿಕಾರ ಎಂಬುದು ಶಾಶ್ವತವಲ್ಲದ ಕಾರಣ ಜನಸೇವೆಗೆ ಅವಕಾಶಗಳಿದ್ದಾಗ ಜನರ ಆಶೋತ್ತರಗಳಿಗೆ ಸ್ಪಂದಿಸುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮಗಳಲ್ಲಿ ಹಾಲುಗುಂದ ಗ್ರಾ. ಪಂ.ಸದಸ್ಯರಾದ ಅಬ್ದುಲ್ ರಹಿಮಾನ್ (ಅಂದಾಯಿ), ಕೆದಮುಳ್ಳೂರು ಗ್ರಾ. ಪಂ. ಸದಸ್ಯರಾದ ಎಂ.ಎಂ. ಇಸ್ಮಾಯಿಲ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಕೋಳುಮಂಡ ರಫೀಕ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಆಲೀರ ಎಂ.ರಶೀದ್, ಪುಂಜೆರ ಯು. ರಂಶಾದ್ ಮೊದಲಾದವರು ಉಪಸ್ಥಿತರಿದ್ದರು.
ವರದಿ: ರಫೀಕ್ ತೂಚಮಕೇರಿ

