ಪಾಡಿ ಶ್ರೀ ಇಗ್ಗುತಪ್ಪ ಚರಿತ್ರೆ

WhatsApp Links
WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ
Reading Time: 7 minutes

ಪಾಡಿ ಶ್ರೀ ಈಶ್ವರ ಇಗ್ಗುತ್ತಪ್ಪ ದೇವಾಲಯದಲ್ಲಿ ಈಶ್ವರ ದೇವರು ಉದ್ಭವ ಲಿಂಗದ ರೂಪದಲ್ಲಿದ್ದು, ಪುರಾತನ ಕಾಲದಿಂದ ಪೂಜಿಸಲ್ಪಡುತ್ತಿದೆ. ನಂತರ ಶ್ರೀ ಸುಬ್ರಮಣ್ಯ ದೇವರ ಅವತಾರವಾದ ಇಗ್ಗುತಪ್ಪ ದೇವರು ಕೇರಳದಿಂದ ಬಂದು ಇಲ್ಲಿ ನೆಲೆ ನಿಂತರು. “ಇಗ್ಗು” ಎಂದರೆ ಕೊಡವ ಭಾಷೆಯಲ್ಲಿ ಆಹಾರ, “ತಪ್ಪ” ಎಂದರೆ ಕೊಡುವುದು. ಹೀಗಾಗಿ ಆಹಾರ ಕೊಡುವ ದೇವರಾಗಿ ಇಗ್ಗುತಪ್ಪ ದೇವರು ಇಲ್ಲಿ ನೆಲೆಸಿದ್ದಾರೆ.

ಅಂದಾಜು ಸರಿ ಸುಮಾರು1300 ವರ್ಷಗಳ ಹಿಂದೆ 6 ಜನ ಅಣ್ಣ-ತಮ್ಮಂದಿರು ಹಾಗೂ ಒಬ್ಬಳು ತಂಗಿ ಒಟ್ಟು 7 ಜನ ದೇವರುಗಳು ಕೇರಳದ ಸಮುದ್ರ ತೀರದಲ್ಲಿ ಶಂಖದಿಂದ ಹುಟ್ಟಿದರೆಂಬುದು ಪ್ರತೀತಿ.ಅವರುಗಳೆಂದರೆ 1. ಕಾಂಞರತಪ್ಪ, 2. ತಿರುಚೆಂಬರಪ್ಪ 3. ಬೇಂದ್ರುಕೋಲಪ್ಪ 4. ಇಗ್ಗುತಪ್ಪ 5. ಪಾಲೂರಪ್ಪ 6. ತಿರುನೆಲ್ಲಿ ಪೆಮ್ಮಯ್ಯ 7. ಪನ್ನಂಗಾಲತಮ್ಮೆ. ಇವರಲ್ಲಿ 3 ಅಣ್ಣಂದಿರು ಕೇರಳ ರಾಜ್ಯದಲ್ಲಿ ನೆಲೆನಿಂತರು. ಉಳಿದ 4 ದೇವರುಗಳು ಕೊಡಗಿನಲ್ಲಿ ನೆಲೆಸಿದ್ದಾರೆ.

ಅಂದು ಕೇರಳದಿಂದ 4 ದೇವತೆಗಳು ಕೊಡಗಿಗೆ ಬಂದಾಗ ಇಲ್ಲಿನ ಪರದಂಡ ಕುಟುಂಬದ ಮನೆಯ ಬಳಿ ವಿಶ್ರಾಂತಿ ಪಡೆಯುತ್ತಾರೆ. ಅಲ್ಲಿಂದ ಆಹಾರಕ್ಕಾಗಿ ಪರದಂಡ ಕುಟುಂಬದ ಮನೆಯ ಹಸುವಿನಿಂದ ಹಾಲನ್ನು ಕರೆದು. ಅನ್ನವನ್ನು ಮಾಡಲು ಅಕ್ಕಿಯನ್ನು ಕೂಡಾ ಕೇಳಿಕೊಳ್ಳುತ್ತಾರೆ. ಹಾಗೆ ವಾಪಾಸ್ಸು ಹೋಗುವಾಗ, ಅಡಿಗೆ ಮಾಡಲು ಬೇಕಾದ ಬೆಂಕಿ ಹಾಗೂ ಉಪ್ಪನ್ನು ಮರೆತು ಬಿಡುತ್ತಾರೆ. ನಂತರ ಅಡಿಗೆ ಮಾಡಲು ಬೆಂಕಿ ಹಾಗೂ ಉಪ್ಪು ಇಲ್ಲದ ಕಾರಣ ಪನ್ನಂಗಾಲತಮ್ಮೆ ಅವರ ಅಣ್ಣಂದಿರ ಬಳಿ ನಾನು ಬೆಂಕಿ ಇಲ್ಲದೆ ಅನ್ನವನ್ನು ಮಾಡುತ್ತೇನೆ, ಹಾಗೇ ನೀವು ಕೂಡಾ ಉಪ್ಪು ಇಲ್ಲದ ಅನ್ನವನ್ನು ತಿನ್ನುವಿರಾ ಎಂದು ಕೇಳಿಕೊಳ್ಳುತ್ತಾರೆ. ಇದನ್ನು ಅಣ್ಣಂದಿರು ಒಪ್ಪಿಕೊಳ್ಳುತ್ತಾರೆ. 

ಅದೇ ಹೊತ್ತಿಗೆ ಅನ್ನವನ್ನು ಬಡಿಸಲು ಬಾಳೆ ಎಲೆಯನ್ನು ತರಲು ಇಗ್ಗುತಪ್ಪ ದೇವರು ಪರಂದಂಡ ಮನೆಯ ಬಳಿ ತೆರಳುತ್ತಾರೆ. ಅಲ್ಲಿ ಮನೆಯಲ್ಲಿ ಕುಟುಂಬದವರು ಯಾರು ಇರಲಿಲ್ಲ, ಅದರಿಂದ ಯಾರನ್ನು ಕೇಳದೆ ಬಾಳೆ ಎಲೆಯನ್ನು ಕುಯ್ಯತ್ತಾರೆ. ಇದನ್ನು ನೋಡಿದ ಒಬ್ಬ ಅಜ್ಜಿ ಇಗ್ಗುತಪ್ಪ ದೇವರಿಗೆ ಬೈಯ್ಯುತ್ತಾರೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಬಾಳೆ ಎಲೆಯನ್ನು ಯಾಕೆ ತೆಗೆಯುತ್ತೀರಾ ಎಂದು. ಇದರಿಂದ ಸಿಟ್ಟಾದ ಇಗ್ಗುತ್ತಪ್ಪ ದೇವರು, ಇನ್ನು ಮುಂದೆ ಈ ಸ್ಥಳದಲ್ಲಿ ಬಾಳೆಮರ ಬೆಳೆಯುವುದಿಲ್ಲ ಎಂದು ಶಾಪವನ್ನು ಹಾಕುತ್ತಾರೆ. ಇದರಿಂದ ಭಯಗೊಂಡ ಅಜ್ಜಿ ಯಜಮಾನನ ಬಳಿ ತಿಳಿಸುತ್ತಾರೆ. ಯಜಮಾನನಿಗೆ ಬಾಳೆ ಎಲೆಯನ್ನು ತೆಗೆಯಲು ಬಂದವರು ದೇವರ ಅವತಾರವೆಂದು ತಿಳಿದಿದ್ದರಿಂದ ಇಗ್ಗುತಪ್ಪ ದೇವರ ಬಳಿ ಬಂದು ಕ್ಷಮೆಯನ್ನು ಕೋರಿ ಪ್ರಾಯಶ್ಚಿತ ಕೇಳುತ್ತಾರೆ. ಅದಕ್ಕೆ ಒಪ್ಪಿದ ಇಗ್ಗುತಪ್ಪ ದೇವರು ಕ್ಷಮೆಯನ್ನು ನೀಡುತ್ತಾರೆ. ಅಲ್ಲದೆ ಇನ್ನು ಮುಂದೆ ನಾನು ಇಲ್ಲಿಯೇ ನೆಲೆ ನಿಲ್ಲುವುದರಿಂದ ಪ್ರಾಯಶ್ಚಿತಕ್ಕಾಗಿ ನಿಮ್ಮ ಕುಟುಂಬ ಇನ್ನು ಮುಂದೆ ನನ್ನ ತಕ್ಕರಾಗಿರಬೇಕು. ಹಾಗೂ ವರ್ಷದ ಎಲ್ಲಾ ಹಬ್ಬಗಳಿಗೂ ನಿಮ್ಮ ಕುಟುಂಬದಿಂದ ಎತ್ತುಪೋರಾಟ ಹಾಗೂ ಪ್ರತೀ ನೈವೇದ್ಯಕ್ಕೆ ಸಣ್ಣ ಅನ್ನ ನೀಡಬೇಕೆಂದು ಹೇಳಿದರು. ಅಂದಿನಿಂದ ಪರದಂಡ ಕುಟುಂಬದವರು ಇಗ್ಗುತಪ್ಪ ದೇವರ ತಕ್ಕರಾಗಿದ್ದಾರೆ.

ಅಷ್ಟೋತ್ತಿಗೆ ತಂಗಿಯಾದ ಪನ್ನಂಗಾಲತಮ್ಮೆ ಅನ್ನವನ್ನು ಮಾಡಲು ಅಕ್ಕಿಯನ್ನು ಹಾಲಿನೊಂದಿಗೆ ಬೆರೆಸಿ ಬಿದಿರಿನ ಕೊಟ್ಟೆಯಲ್ಲಿ ಹಾಕಿ ಅಂಬಲ ಹೊಳೆಯ ದಡದಲ್ಲಿರುವ ಬಿಸಿ ಮರಳಿನ ಅಡಿಯಲ್ಲಿ ಹೂಳುತ್ತಾರೆ. ಅದು ಮರಳಿನ ಬಿಸಿಗೆ ಕುದ್ದು ಅನ್ನವಾಗುತ್ತದೆ. ತಯಾರಾದ ಅನ್ನವನ್ನು ಪನ್ನಂಗಾಲತಮ್ಮೆ ಅಣ್ಣಂದಿರಿಗೆ ಇಗ್ಗುತಪ್ಪ ತಂದ ಬಾಳೆ ಎಲೆಯಲ್ಲಿ ಬಡಿಸುತ್ತಾರೆ. ಉಪ್ಪಿಲ್ಲದ ಊಟವನ್ನು ತಿಂದ ಅಣ್ಣಂದಿರಿಗೆ ರುಚಿ ಇಲ್ಲದ ಕಾರಣ ಅನ್ನವನ್ನು ತಿನ್ನದೆ ಮೇಲಕ್ಕೆ ಎಸೆಯುತ್ತಾರೆ. ಇದರಿಂದ ಸಿಟ್ಟಾದ ತಂಗಿ ಪನ್ನಂಗಾಲತಮ್ಮೆ 3 ಜನ ಅಣ್ಣಂದಿರಿಗೂ ಸಟ್ಟಗದಿಂದ ಹೊಡೆಯುತ್ತಾರೆ. 

ಇದಕ್ಕೆ ಪ್ರತಿಯಾಗಿ ತಂಗಿಯನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ಅಣ್ಣಂದಿರು ಪಣತೊಡುತ್ತಾರೆ. ಅದರ ಯೋಜನೆಯ ಪ್ರಕಾರ ಅಣ್ಣಂದಿರು ಅಡಿಕೆ ಮತ್ತು ವಿಲ್ಯದೆಲೆಯನ್ನು ತಿನ್ನಲು ಪ್ರಾರಂಭಿಸುತ್ತಾರೆ. ತಿನ್ನುವ ಸಂದರ್ಭದಲ್ಲಿ ಯಾರ ಬಾಯಿ ಕೆಂಪಾಗಿದೆ ಎಂದು ನೋಡಲು ಅದನ್ನು ಕೈಗೆ ಉಗಿದು ನೋಡಿ, ಉಗುಳಿದ ಎಂಜಲನ್ನು ಎತ್ತಿ ತಲೆಯ ಮೇಲಿನಿಂದ ಹಿಂದಕ್ಕೆ ಎಸೆಯುತ್ತಾರೆ. ಇದನ್ನು ಸರಿಯಾಗಿ ಗಮನಿಸದ ತಂಗಿ ಉಗುಳಿದ ಎಂಜಲನ್ನು ವಾಪಾಸ್ಸು ತನ್ನ ಬಾಯಿಗೆ ಹಾಕುತ್ತಾರೆ. ಅಗ ಅಣ್ಣಂದಿರು ನೀನು ಉಗುಳಿದ ಎಂಜಲನ್ನು ಪುನ: ತಿಂದದ್ದು ದೇವರ ಕುಲಕ್ಕೆ ಇದು ಒಳ್ಳೆಯದಲ್ಲ ಎಂದು ಹೇಳಿ ಕುಲ ಬದಲು ಮಾಡುತ್ತಾರೆ. ಹಾಗೇ ಅಣ್ಣಂದಿರಿಂದ ಬೇರ್ಪಟ್ಟ ತಂಗಿ ಪನ್ನಂಗಾಲತಮ್ಮೆ ಎಂಬಲ್ಲಿ ನೆಲೆ ನಿಲ್ಲುತ್ತಾರೆ. ಅಲ್ಲಿಂದ ಹೊರಟ ಉಳಿದ 3 ಜನ ಅಣ್ಣಂದಿರು ಮುಂದೆ ಹೋಗಿ ಇಗ್ಗುತಪ್ಪ ದೇವರು ತಾವು ಮೊದಲೇ ಬಾಣ ಹೊಡೆದು ಬಾಣ ಬಿದ್ದ ಸ್ಥಳವಾದ ಅಮ್ಮಂಗೇರಿಯಲ್ಲಿ (ಈಗಿನ ದೇವಾಲಯ ಇರುವ ಸ್ಥಳ) ದಲ್ಲಿ ನೆಲೆಸುತ್ತಾರೆ. ಹಾಗೂ ಪಾಲೂರಿನಲ್ಲಿ ಪಾಲೂರಪ್ಪ ಹಾಗೂ ತಿರುನೆಲ್ಲಿಯಲ್ಲಿ ಪೆಮ್ಮಯ್ಯ ನೆಲೆ ನಿಲ್ಲುತ್ತಾರೆ. ಹೀಗೆ ದೇವರ ಅವತಾರದಲ್ಲಿ ಜನಿಸಿ ಬಂದ ಸಹೋದರ ಸಹೋದರಿಯರು ತಮ್ಮ ತಮ್ಮ ಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ನೆಲೆ ನಿಲ್ಲುತ್ತಾರೆ.

ಇಗ್ಗುತಪ್ಪ ದೇವರು ಹಾಗೂ ಪುತ್ತರಿ ಹಬ್ಬ:

ಇಗ್ಗುತಪ್ಪ ದೇವರಿಗೆ ಪುತ್ತರಿ ಹಬ್ಬವನ್ನು ಪ್ರಾರಂಭಿಸಿದ  ಪ್ರತೀತಿ ಇದೆ. ಈ ಹಿಂದೆ ಕೊಡಗಿನ ಜನರು ತಾವು ಬೆಳೆಸಿದಂತಹ ಬೆಳೆಗೆ ಯಾವುದೇ ಸುಗ್ಗಿಯನ್ನು ಆಚರಣೆ ಮಾಡದಂತಹ ಸಮಯದಲ್ಲಿ ಶ್ರೀ ಇಗ್ಗುತ್ತಪ್ಪ ದೇವರು ಕೇರಳದ ‘ಓಣತಮ್ಮೆ’ ಎಂಬ ಓಣಂ ಹಬ್ಬದ ದೇವತೆಯನ್ನು ಕರೆದು ದೇವತೆಯ ಕೈಯಿಂದ ಒಂದು ಚೆಂಬೆನೆ ಓಲೆಯನ್ನೊಳಗೊಂಡ ಗಂಟನ್ನು ತರುತ್ತಾರೆ. ಆ ಓಲೆಯಲ್ಲಿ “ಓಣಂ” ಹಬ್ಬ ಆದ 90 ದಿನಗಳ ನಂತರ ಪುತ್ತರಿ ಹಬ್ಬವನ್ನು ಮಾಡಬೇಕು, ಕೃತಿಕಾ ನಕ್ಷತ್ರದಲ್ಲಿ ಹಬ್ಬ ಆಗಬೇಕು. ರೋಹಿಣೀ ನಕ್ಷತ್ರದಲ್ಲಿ ಕದಿರು ತೆಗೆದರೆ ಶುಭವಾಗುವುದು ಎಂದು ಬರೆದಿರುತ್ತಾರೆ. ಆ ದಿನ ಹುಣ್ಣಿಮೆಯ ಒಂದು ದಿನ ಹಿಂದೆ ಅಥವಾ ಮುಂದೆ ಇರಬಹುದು. ಹಾಗೆ ಪುತ್ತರಿ ಹಬ್ಬವು ಈ ದೇವಾಲಯಕ್ಕೆ ಪ್ರಮುಖವಾದ ಹಾಗೂ ದೊಡ್ಡದಾದ ಹಬ್ಬವಾಗಿದೆ. ಹಬ್ಬದ ದಿನಾಂಕವನ್ನು 15 ದಿನಗಳ ಮುಂಚೆ ನಿಗಡಿ ಮಾಡುತ್ತಾರೆ.

 

ಮಾಹಿತಿ: ಪರದಂಡ ಪ್ರಿನ್ಸ್‌ ತಮ್ಮಪ್ಪ(ದೇವ ತಕ್ಕರು)

 ನಾಲಡಿ.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x