ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಏರಿಕೆಯಾಗಿದ್ದರೂ, ಕೊಡಗಿನ ಕಾಫಿ ಬೆಳೆಗಾರರಿಗೆ ಮಾತ್ರ ಅದರ ಲಾಭ ಸಿಗುತ್ತಿಲ್ಲ. ಈ ಬಗ್ಗೆ ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆ ನೀಡಿ, ಕಾಫಿ ರಫ್ತುದಾರರು ಮತ್ತು ಮಧ್ಯವರ್ತಿಗಳು ಬೆಳೆಗಾರರಿಗೆ ಸೂಕ್ತ ಬೆಲೆ ನೀಡದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಂತರಾಷ್ಟ್ರೀಯ ದರಕ್ಕೆ ಅನುಗುಣವಾಗಿ ಬೆಲೆ ನೀಡದ ಖರೀದಿದಾರರ ಪರವಾನಗಿಯನ್ನು ರದ್ದುಗೊಳಿಸಲು ಎಲ್ಲಾ ಗ್ರಾಮ ಪಂಚಾಯಿತಿಗಳು ಚಿಂತನೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಣ್ಣ ಮತ್ತು ಮಧ್ಯಮ ವರ್ಗದ ಕಾಫಿ ಬೆಳೆಗಾರರು ಹಲವು ಸಂಕಷ್ಟಗಳ ನಡುವೆಯೂ ಕಾಫಿ ಬೆಳೆಯನ್ನೇ ನಂಬಿ ಬದುಕು ನಡೆಸುತ್ತಿದ್ದಾರೆ. ದರ ಏರಿಕೆಗಾಗಿ ಎದುರು ನೋಡುತ್ತಿದ್ದ ಅವರಿಗೆ, ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿದರೂ, ಅದರ ಪ್ರಯೋಜನ ಸಿಗದಿರುವುದು ನಿರಾಶೆ ತಂದಿದೆ.
ಬೆಳೆಗಾರರಿಗೆ ಅನ್ಯಾಯ ಮಾಡುತ್ತಿರುವವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಎಲ್ಲಾ ಬೆಳೆಗಾರರ ಸಹಕಾರದೊಂದಿಗೆ ಕ್ರಮ ಕೈಗೊಳ್ಳುವುದಾಗಿ ಮೊಣ್ಣಪ್ಪ ತಿಳಿಸಿದ್ದಾರೆ. ಕಾಫಿ ಕೊಡಗಿನ ಜೀವಾಳವಾಗಿದ್ದು, ಬೆಳೆಗಾರರು ಮಾತ್ರವಲ್ಲದೆ, ಸಾವಿರಾರು ಕೂಲಿ ಕಾರ್ಮಿಕರ ಕುಟುಂಬಗಳ ಜೀವನವೂ ಇದರ ಮೇಲೆ ಅವಲಂಬಿತವಾಗಿದೆ. ಈ ಎಲ್ಲರಿಗೂ ನ್ಯಾಯ ಸಿಗಬೇಕಾದರೆ, ಅಂತರಾಷ್ಟ್ರೀಯ ಬೆಲೆಗೆ ತಕ್ಕಂತೆ ಸ್ಥಳೀಯವಾಗಿ ಕಾಫಿಗೆ ಬೆಲೆ ನಿಗದಿಪಡಿಸುವುದು ಅವಶ್ಯಕ ಎಂದು ಅವರು ಒತ್ತಿ ಹೇಳಿದ್ದಾರೆ.