ಕರಗ: ಕರಗ ಎಂದರೇನು? ಇದರಲ್ಲಿ ಏನಿದೆ?

ಕರಗ ಎಂದರೇನು? ಇದರಲ್ಲಿ ಏನಿದೆ?
ಆದಿಶಕ್ತಿಯನ್ನು ಆರಾಧಿಸುವ ಹಲವಾರು ಪ್ರಮುಖ ಉತ್ಸವಗಳಲ್ಲಿ ಕರಗ ಮಹೋತ್ಸವವೂ ಒಂದು. ಈ ಕರಗ ಎನ್ನುವ ಪದವು ವಿಶೇಷ ಅರ್ಥವನ್ನು ಹೊಂದಿದೆ. ಕರಗ ಎಂದರೆ ಅಕ್ಷರಶಃ ‘ಕುಂಭ’ ಎಂಬುದಾಗಿದೆ. ಕರಗ ಎನ್ನುವ ಪದದಲ್ಲಿನ ಒಂದೊಂದು ಶಬ್ಧವು ವಿವಿಧ ಬಗೆಯ ಅರ್ಥವನ್ನು ನೀಡುತ್ತದೆ. ಕರಗ ದಲ್ಲಿ ಕ ಎಂದರೆ ಕೈಯಿಂದ ಮುಟ್ಟದ, ರ ಎಂದರೆ ರುಂಡದ ಮೇಲೆ ಧರಿಸುವ, ಗ ಎಂದರೆ ತಿರುಗುವುದು ಎಂಬರ್ಥವನ್ನು ನೀಡುತ್ತದೆ.
ಒಂದು ತಾಮ್ರದ ಬಿಂದಿಗೆಯಲ್ಲಿ ಮರಳನ್ನು ತುಂಬಿಸಲಾಗುತ್ತದೆ. ಜೊತೆಗೆ ದೇವಿಗೆ ಅಗತ್ಯವಾಗಿ ಬೇಕಾದ ಕಪ್ಪು ಬಳೆ, ಕರಿಮಣಿ, ಅರಶಿಣ-ಕುಂಕುಮ, ಎಲೆ ಅಡಿಕೆ, ಕಾಡೋಲೆ ಮತ್ತು ಒಂದುಕಾಲು ರೂಪಾಯಿಯ ಕಾಣಿಕೆ ಸಹ ಇರುತ್ತದೆ. ಅದರ ಮೇಲೆ ತೆಂಗಿನಕಾಯಿ, ವೀಳ್ಯದೆಲೆ, ಮಾವಿನೆಲೆಗಳಿಂದ ಕೂಡಿದ ಕಳಸ, ಮೇಲ್ಭಾಗದಲ್ಲಿ ದೇವಿಯ ಮುಖವಾಡ-ಪ್ರಭಾವಳಿ ಇದ್ದರೆ, ತುದಿಯಲ್ಲಿ ಪುಟ್ಟ ಬೆಳ್ಳಿಯ ಕೊಡೆ ಇರುತ್ತದೆ.
ಕರಗವನ್ನು ಮಲ್ಲಿಗೆ, ಸೇವಂತಿಗೆ, ಕನಕಾಂಬರ ಮತ್ತು ಗುಲಾಬಿ ಹೂಗಳಿಂದ ಅಲಂಕರಿಸಲಾಗುತ್ತದೆ. ಅರ್ಚಕರ ಕೈಯಲ್ಲಿ ಬೆತ್ತ ಮತ್ತು ಕಠಾರಿ ಇರುತ್ತದೆ. ಬೆತ್ತದಲ್ಲಿ ವಿಶಿಷ್ಟ ಶಕ್ತಿ ಇದ್ದು, ಇದರ ಸ್ಪರ್ಶದಿಂದ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ಕೊಡಗಿನ ಜನರಿಂದ ಪ್ರತಿಷ್ಠಾಪಿಸಲ್ಪಟ್ಟು ಮಡಿಕೇರಿ ನಗರದಲ್ಲಿ ನೆಲೆಸಿದ್ದ ಐದು ಶಕ್ತಿದೇವತೆಗಳಾದ “ಮಡಿಕೇರಿ ನಗರದ ಆದಿ ದೇವತೆ ಕರವಲೆ ಶ್ರೀ ಮಹಿಷಮರ್ದಿನಿ ಭಗವತಿ, ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋಟೆಮಾರಿಯಮ್ಮ, ಮತ್ತು ಶ್ರೀ ಕಂಚಿಕಾಮಾಕ್ಷಿಯಮ್ಮ” ಇದರಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗಗಳು ಹಾಗೂ ಆದಿ ದೇವತೆ ಕರವಲೆ ಶ್ರೀ ಮಹಿಷಮರ್ದಿನಿ ಭಗವತಿ ಅಮ್ಮನವರು ನೂರಾರು ವರ್ಷಗಳಿಂದ ನಗರದ ಜನತೆಯ ಎಲ್ಲಾ ಸಂಕಷ್ಟಗಳನ್ನು ನಿವಾರಿಸುವುದರ ಮೂಲಕ ನಾಡಿನ ನೆಚ್ಚಿನ ಆರಾಧ್ಯ ದೈವರಾಗಿ ಮೆರೆಯುತ್ತಿದ್ದಾರೆ. ಈ ಶಕ್ತಿ ದೇವತೆಗಳಿರುವುದರಿಂದ ನಾಡಿಗೆ ಯಾವ ಆಪತ್ತುಗಳಾಗಲಿ ಮಾರಕ ಸಾಂಕ್ರಾಮಿಕ ರೋಗಗಳಾಗಲಿ ಬರುವುದಿಲ್ಲವೆಂದು ನಾಡಿನ ಜನತೆಯ ಬಲವಾದ ನಂಬಿಕೆ.
ಮಡಿಕೇರಿ ದಸರಾ 2025
ಪೌರಾಣಿಕ ಕಥೆಗಳು, ಅದ್ಭುತ ಆಚರಣೆಗಳು ಮತ್ತು ಸಾಂಸ್ಕೃತಿಕ ವೈಭವದ ಹಬ್ಬ.
ಮಡಿಕೇರಿ ದಸರಾ 2025ರ ಹೆಚ್ಚಿನ ಮಾಹಿತಿಗಾಗಿ ಡೌನ್‌ಲೋಡ್ ಮಾಡಿ ಸರ್ಚ್ ಕೂರ್ಗ್ App
ಪ್ರಮುಖ ಮಾಹಿತಿ
-
•
ದಸರಾ ಉತ್ಸವ: ಮಡಿಕೇರಿ ದಸರಾ ಉತ್ಸವವು ನಾಲ್ಕು ಶಕ್ತಿ ದೇವತೆಗಳ ಆರಾಧನೆ ಮತ್ತು ಹತ್ತು ದಿನಗಳ ವೈಭವದ ಉತ್ಸವಕ್ಕೆ ಹೆಸರುವಾಸಿಯಾಗಿದೆ.
-
•
ಜೀವಂತ ದೃಶ್ಯಗಳು: ವಿಶಿಷ್ಟವಾದ ಕಲಾ ಪ್ರಕಾರಗಳು, ಪೌರಾಣಿಕ ಕಥೆಗಳನ್ನು ಆಧರಿಸಿದ ಅದ್ಭುತ ದೃಶ್ಯಗಳು ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುತ್ತವೆ.
-
•
ಕರಗ ಮಹೋತ್ಸವ: ಈ ಹಬ್ಬದ ಪ್ರಮುಖ ಆಕರ್ಷಣೆಯಾದ ಕರಗ ಮಹೋತ್ಸವವು ರಾತ್ರಿಪೂರ್ತಿ ನಡೆಯುವ ವರ್ಣರಂಜಿತ ಮೆರವಣಿಗೆಯಾಗಿದೆ.