ಉದ್ಯಮದಿಂದ ಕಾಫಿ ಕೃಷಿಯತ್ತ ನನ್ನ ಪ್ರಯಾಣ: ಕಾಫಿ ಬೆಳೆಗಾರರಾದ ನಂದಿನೆರವಂಡ ಅಪ್ಪಯ್ಯನವರೊಂದಿಗಿನ ಸಂದರ್ಶನ
Reading Time: 9 minutes

 

ಉದ್ಯಮದಿಂದ ಕಾಫಿ ಕೃಷಿಯತ್ತ ನನ್ನ ಪ್ರಯಾಣ: ಕಾಫಿ ಬೆಳೆಗಾರರಾದ ನಂದಿನೆರವಂಡ ಅಪ್ಪಯ್ಯನವರೊಂದಿಗಿನ ಸಂದರ್ಶನಉದ್ಯಮದಿಂದ ಕಾಫಿ ಕೃಷಿಯತ್ತ ನನ್ನ ಪ್ರಯಾಣ

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಸಂದರ್ಶನ: ನಂದಿನೆರವಂಡ ಅಪ್ಪಯ್ಯನವರೊಂದಿಗೆ | ಪ್ರಕಟಣೆ ದಿನಾಂಕ: ಅಕ್ಟೋಬರ್ 20, 2025

Farmer Appiah holding up coffee beans.
ಸಂದರ್ಶನ ನೀಡಿದ ನಂದಿನೆರವಂಡ ಅಪ್ಪಯ್ಯನವರು.

ಕಾಫಿ ಬೆಳೆಗಾರರಾದ ನಂದಿನೆರವಂಡ ಅಪ್ಪಯ್ಯನವರೊಂದಿಗಿನ ಸಂದರ್ಶನ: ಉದ್ಯಮದಿಂದ ಕಾಫಿ ಕೃಷಿಯತ್ತ ಅವರ ಪ್ರಯಾಣದ ಸ್ಫೂರ್ತಿದಾಯಕ ಕಥೆ ಇಲ್ಲಿದೆ.

ಪ್ರಾರಂಭಿಕ ಜೀವನ ಮತ್ತು ವೃತ್ತಿಜೀವನ

ನಮಸ್ತೇ ಅಪ್ಪಯ್ಯನವರೇ ನಿಮ್ಮ ಬಗ್ಗೆ ತಿಳಿಸಿ.

ನಮಸ್ತೇ, ನಾನು ನಂದಿನೆರವಂಡ ಅಪ್ಪಣ್ಣ ಮತ್ತು ಗಂಗಮ್ಮ ಅವರ ಎರಡನೇ ಮಗ. ನಾನು 1945ರ ಮಾರ್ಚ್ 30ರಂದು ಮಡಿಕೇರಿ ಬಳಿಯ ಇಬ್ನಿವಲವಾಡಿ ಗ್ರಾಮದಲ್ಲಿ ಜನಿಸಿದೆ. ನನ್ನ ಪ್ರಾಥಮಿಕ ಶಿಕ್ಷಣವು ಬೋಯಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿವರೆಗೆ ನಡೆಯಿತು. ನಂತರ, ಮಡಿಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಈಗಿನ ಜೂನಿಯರ್ ಕಾಲೇಜು) ಮತ್ತು ಎಫ್.ಎಂ.ಸಿ. ಕಾಲೇಜಿನಲ್ಲಿ ಪಿಯುಸಿ ಮತ್ತು ಡಿಗ್ರಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದೆ. 1968ರಲ್ಲಿ ಡಿಗ್ರಿ ಮುಗಿದ ನಂತರ, ಎರಡು ವರ್ಷಗಳ BGL (Bachelor of General Law) ಕೋರ್ಸ್‌ಗಾಗಿ ಬೆಂಗಳೂರಿಗೆ ಹೋದೆ.

ಶಿಕ್ಷಣದ ನಂತರ ನಿಮ್ಮ ಆರಂಭಿಕ ವೃತ್ತಿಜೀವನ ಮತ್ತು ಕೆಲಸದ ಅನುಭವ ಹೇಗಿತ್ತು?

ಶಿಕ್ಷಣ ಮುಗಿದ ಮೇಲೆ ಉದ್ಯೋಗವನ್ನು ಅರಸಿಕೊಂಡು ಬೆಂಗಳೂರು, ಚೆನ್ನೈ, ಮುಂಬೈ, ವಿಶಾಖಪಟ್ಟಣಂ ಮತ್ತು ಕೋಲ್ಕತ್ತಾದಂತಹ ಪ್ರಮುಖ ನಗರಗಳಲ್ಲಿ ಕೆಲಸದಲ್ಲಿ ತೊಡಗಿದೆ. ಮೊದಲು ಒಂದು ಜಾಹೀರಾತು ಸಂಸ್ಥೆಯಲ್ಲಿ, ಆಮೇಲೆ ಮುಂಬೈನಲ್ಲಿ ‘ಪೆಸ್ಟ್ ಕಂಟ್ರೋಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಕಂಪನಿಯಲ್ಲಿ ತರಬೇತಿ ಮುಗಿಸಿ, ಆರು ತಿಂಗಳು ವಿಶಾಖಪಟ್ಟಣದಲ್ಲಿ ಕೆಲಸ ಮಾಡಿದೆ. ನಂತರ ಚೆನ್ನೈಗೆ (ಮೆಡ್ರಾಸ್‌ಗೆ) ಟ್ರಾನ್ಸ್‌ಫರ್ ಆಗಿ ಅಲ್ಲಿ ಎರಡು ವರ್ಷ ಕೆಲಸ ಮಾಡಿದೆ.

ಬೇರೆಯವರ ಅಡಿಯಲ್ಲಿ ಕೆಲಸ ಮಾಡುವುದರಿಂದ ಸ್ವಂತ ಉದ್ಯಮದತ್ತ ನಿಮ್ಮ ನಿರ್ಧಾರ ಏಕೆ ಬದಲಾಯಿತು?

ಇನ್ನೊಬ್ಬರ ಕೆಳಗೆ ಕೆಲಸ ಮಾಡುವ ಬದಲು, ನಾನೇ ಸ್ವಂತವಾಗಿ ಸ್ವಾವಲಂಬಿಯಾಗಿ ಒಂದು ಉದ್ಯೋಗವನ್ನು ಪ್ರಾರಂಭ ಮಾಡಬೇಕು ಎಂದು ನಿರ್ಧರಿಸಿದೆ. ನಾನು ಚೆನ್ನೈನಲ್ಲಿ ‘ಪೇಸ್ಟ್ ಕಂಟ್ರೋಲ್ ಅಂಡ್ ಎಕ್ವಿಪ್ಮೆಂಟ್ ಕಂಪನಿ’ಯನ್ನು ಶುರು ಮಾಡಿದೆ. ನಮ್ಮ ಕಂಪನಿಯಲ್ಲಿ ಡೊಮೆಸ್ಟಿಕ್ ಪೆಸ್ಟ್ ಕಂಟ್ರೋಲ್, ಕೀಟ ನಿಯಂತ್ರಣ ಮತ್ತು ರಕ್ಷಣೆಯಂತಹ ಸೇವೆಗಳನ್ನು ನೀಡುತ್ತಿದ್ದೆವು. 1975ರಲ್ಲಿ ಆರಂಭವಾದ ಈ ಸಂಸ್ಥೆ 2002ರವರೆಗೆ ಯಶಸ್ವಿಯಾಗಿ ನಡೆಯಿತು ಮತ್ತು 20 ರಿಂದ 30 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು. ಕೋಲ್ಕತ್ತಾ ಮತ್ತು ಅಂಬೂರುಗಳಲ್ಲಿ ಸಹ ನಮ್ಮ ಕಂಪನಿಯ ಶಾಖೆಗಳನ್ನು ತೆರೆದಿದ್ದೆವು.

ನಿಮ್ಮ ವೈಯಕ್ತಿಕ ಜೀವನದ ಬಗ್ಗೆ, ಕುಟುಂಬದ ಬಗ್ಗೆ ತಿಳಿಸಿ.

ನಾನು 1978ರಲ್ಲಿ ಮಾದಾಪುರ ಬಳಿಯ ಬಿಳಿಗೇರಿ ಗ್ರಾಮದ ಬಾಚಿನಾಡಂಡ ದೇವಕಿಯವರನ್ನು ಮದುವೆಯಾದೆ. ನಮ್ಮ ಇಬ್ಬರು ಗಂಡು ಮಕ್ಕಳು ಚೆನ್ನೈನಲ್ಲಿ ವಿದ್ಯಾಭ್ಯಾಸ ಮುಗಿಸಿ, ಉದ್ಯೋಗಕ್ಕಾಗಿ ಹೊರದೇಶಕ್ಕೆ ಹೋಗಿ, ಪ್ರಸ್ತುತ ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

“ಕಾಫಿ ಕೃಷಿ ಒಂದು ‘ಸಸ್ಟೇನಬಲ್ ಬಿಸಿನೆಸ್’, ಹೊರತು ಒಂದೇ ಬಾರಿಯಲ್ಲಿ ಶ್ರೀಮಂತರಾಗುವ ಉದ್ಯೋಗವಲ್ಲ.”

— ನಂದಿನೆರವಂಡ ಅಪ್ಪಯ್ಯ

ಕಾಫಿ ಕೃಷಿ ಮತ್ತು ನಿರ್ವಹಣೆ

ನಿಮಗೆ ಕಾಫಿ ಕೃಷಿಯ ಮೇಲೆ ಆಸಕ್ತಿ ಮೂಡಿದ್ದು ಯಾವಾಗ ಮತ್ತು ನೀವು ತೋಟಗಾರಿಕೆಯನ್ನು ಹೇಗೆ ಆರಂಭಿಸಿದಿರಿ?

ಸುಮಾರು 1986-87ರ ಸಮಯದಲ್ಲಿ ನನಗೆ ಕಾಫಿ ಕೃಷಿಯ ಮೇಲೆ ಆಸಕ್ತಿ ಹೆಚ್ಚಾಯಿತು. ಕೊಡಗಿನಲ್ಲಿ ನಮ್ಮ ಅಜ್ಜನ ಆಸ್ತಿಯ ಜೊತೆಗೆ ಇನ್ನೂ ಹೆಚ್ಚಿಗೆ ಸುಮಾರು 20 ಎಕರೆ ಜಾಗವನ್ನು ತೆಗೆದುಕೊಂಡು ಹೊಸದಾಗಿ ಕಾಫಿ ತೋಟವನ್ನು ಪ್ರಾರಂಭ ಮಾಡಿದೆ.

ಕಾಫಿ ಕೃಷಿಯ ಆರಂಭಿಕ ಸವಾಲುಗಳನ್ನು ನೀವು ಹೇಗೆ ನಿರ್ವಹಿಸಿದಿರಿ?

ಆ ಸಂದರ್ಭದಲ್ಲಿ ಕಾಫಿಗೆ ಹೆಚ್ಚಿನ ಆದಾಯ ಬರುತ್ತಿರಲಿಲ್ಲ. ಒಂದು ಒಳ್ಳೆಯ ಕಾಫಿ ತೋಟ ಬೆಳೆಯಲು ಕನಿಷ್ಠ ಹದಿನೈದು ವರ್ಷಗಳು ಬೇಕಾಗಿದ್ದವು. ಹಾಗಾಗಿ, ಆಗ ನನ್ನ ಕಂಪನಿಯಲ್ಲಿ ಬರುತ್ತಿದ್ದ ಆದಾಯವನ್ನೇ ತೋಟಗಳ ನಿರ್ವಹಣೆ ಮತ್ತು ಖರ್ಚಿಗೆ ಬಳಸುತ್ತಿದ್ದೆ.

ನಿಮ್ಮ ತೋಟದಲ್ಲಿ ಬೆಳೆಗಳ ಆಯ್ಕೆಯಲ್ಲಿ ನೀವು ಮಾಡಿದ ಪ್ರಮುಖ ಬದಲಾವಣೆಗಳು ಯಾವುವು?

ಮೊದಲು ನಾನು ಅರೇಬಿಕಾ ಗಿಡಗಳನ್ನು ಮತ್ತು ಕಿತ್ತಳೆ ಗಿಡಗಳನ್ನು ನೆಟ್ಟಿದ್ದೆ. ಆದರೆ ಕಿತ್ತಳೆ ಅಂತರ ಬೆಳೆಯಲ್ಲದ ಕಾರಣ, ಅದನ್ನು ಸಂಪೂರ್ಣವಾಗಿ ತೆಗೆದು ಪೂರ್ಣವಾಗಿ ಕಾಫಿ ಕೃಷಿಯನ್ನು ಮುಂದುವರೆಸಿದೆ. 15 ವರ್ಷಗಳ ದೊಡ್ಡ ಮರವಾಗಿ ಬೆಳೆದಿದ್ದ ಕಿತ್ತಳೆ ಗಿಡಗಳನ್ನು ತೆಗೆದು ಕಾಫಿ ನೆಟ್ಟೆ. ಅಲ್ಲದೆ, ಅರೇಬಿಕಾ ಗಿಡಗಳ ಬದಲಿಗೆ ರೋಬಸ್ಟಾ ಕಾಫಿಯನ್ನು ನೆಡಲಾಯಿತು, ಇದರಿಂದ ಫಸಲು ಕೂಡ ಹೆಚ್ಚಾಗಿ ಬರಲು ಶುರುವಾಯಿತು.

ನಿಮ್ಮ ದೃಷ್ಟಿಯಲ್ಲಿ ಕಾಫಿ ಕೃಷಿ ಕೇವಲ ಹವ್ಯಾಸವೇ ಅಥವಾ ಪೂರ್ಣ ಪ್ರಮಾಣದ ಉದ್ಯಮವೇ?

ಕಾಫಿ ತೋಟದ ಕೃಷಿ ಕೇವಲ ಹವ್ಯಾಸವಲ್ಲ; ಅದು ಪೂರ್ಣ ಪ್ರಮಾಣದ ಉದ್ಯಮದಂತೆ. ನಾವು ಇಲ್ಲೇ ಇರಬೇಕು, ನಮ್ಮ ಉಪಸ್ಥಿತಿ ಮುಖ್ಯ. ಇನ್ವೆಸ್ಟ್ ಮಾಡಿ, ಖರ್ಚು ಮಾಡಿ, ಆದಾಯವನ್ನು ತೆಗೆಯಬೇಕು, ಮತ್ತು ತೋಟವನ್ನು ಸುಸ್ಥಿರವಾಗಿ ಇಡಬೇಕು.

ಫಸಲಿನ ಸ್ಥಿರತೆ (Sustainable Yield) ಮತ್ತು ಹೆಚ್ಚು ಇಳುವರಿ ಪಡೆಯುವ ನಿಮ್ಮ ಪ್ರಯೋಗದ ಅನುಭವದ ಬಗ್ಗೆ ವಿವರಿಸಿ.

ನಾವು ಒಂದು ವರ್ಷ ಒಂದು ಎಕರೆಗೆ 70-80 ಚೀಲ ಫಸಲನ್ನು ತೆಗೆದಿದ್ದೆವು. ಆದರೆ ಹೊಸ ರೆಂಬೆಯಲ್ಲಿ ಒಂದೇ ವರ್ಷದಲ್ಲಿ ಕಾಫಿ ಬರುವುದಿಲ್ಲದ ಕಾರಣ, ನಂತರದ ವರ್ಷದಲ್ಲಿ ಫಸಲು ತುಂಬಾ ಕಡಿಮೆ ಆಯಿತು. ಈಗ ನಾನು ಆ ಹೆಚ್ಚು ಫಸಲು ತೆಗೆಯುವ ಆಸೆಯನ್ನು ಬಿಟ್ಟು, ಪ್ರತಿ ವರ್ಷ ಸರಾಸರಿ **30 ರಿಂದ 40 ಚೀಲ ಕಾಫಿಯನ್ನು** ಒಂದು ಎಕರೆಗೆ ತೆಗೆಯುತ್ತೇನೆ. ಇದರಿಂದ ಫಸಲು ಸ್ಥಿರವಾಗಿ (sustainable) ಬರುತ್ತದೆ.

ಕೊಡಗಿನಲ್ಲಿ ಕಾಫಿ ತೋಟ ನಿರ್ವಹಣೆಯ ಸರಾಸರಿ ವಾರ್ಷಿಕ ವೆಚ್ಚ ಎಷ್ಟು?

ಪ್ರತಿ ವರ್ಷ ಒಂದು ಎಕರೆ ಕಾಫಿ ತೋಟಕ್ಕೆ ಸರಾಸರಿ **₹1 ಲಕ್ಷದಿಂದ ₹1.25 ಲಕ್ಷದವರೆಗೆ** ಖರ್ಚಾಗಲಿದೆ.

ಹೆಚ್ಚಿನ ಆದಾಯ ಗಳಿಸಲು ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಯಾವ ಬದಲಾವಣೆಗಳ ಅಗತ್ಯವಿದೆ?

ನಮ್ಮ ಅಜ್ಜನ ಕಾಲದ ಸಾಂಪ್ರದಾಯಿಕ ಕೃಷಿಯನ್ನು ಮಾಡಿದರೆ ಹೆಚ್ಚು ಇಳುವರಿ ಸಿಗುವುದಿಲ್ಲ. ಹೆಚ್ಚು ಆದಾಯ ಮಾಡಲು ಹೊಸತನದ ಪ್ರಯೋಗಕ್ಕೆ ನಾವು ಹೊಂದಿಕೊಳ್ಳಬೇಕು.

ಕಾರ್ಮಿಕರು ಮತ್ತು ಸಮುದಾಯ

ಕಾಫಿ ಕೃಷಿಯಲ್ಲಿ ನೀವು ಎದುರಿಸುತ್ತಿರುವ ಕಾರ್ಮಿಕರ ಕೊರತೆಯ ಬಗ್ಗೆ ವಿವರಿಸಿ.

ಈಗಿನ ಕಾಲದಲ್ಲಿ ಕಾರ್ಮಿಕರ ಕೊರತೆಯಿಂದ ಕಾಫಿ ತೋಟದಲ್ಲಿ ಕೆಲಸ ಮಾಡುವುದು ಕಷ್ಟ. ನುರಿತ ಕಾರ್ಮಿಕರ ಕೊರತೆ ಇದೆ. ಅನುಭವವುಳ್ಳ ಲೇಬರ್‌ಗಳು ಇಲ್ಲದಿದ್ದರೆ, ಮಾಲೀಕರೇ ಪೂರ್ತಿಯಾಗಿ ಕಾಫಿ ಬಗ್ಗೆ ತಿಳಿದುಕೊಳ್ಳಬೇಕು. ಈಗ ಕೆಲಸ ಮಾಡುತ್ತಿರುವ ಕಾರ್ಮಿಕರ ಎರಡನೇ ಮತ್ತು ಮೂರನೇ ತಲೆಮಾರು ಸ್ಥಳೀಯವಾಗಿ ಕೃಷಿ ಕೆಲಸದಲ್ಲಿ ಉಳಿದಿಲ್ಲ.

ಕಾರ್ಮಿಕರನ್ನು ಉಳಿಸಿಕೊಳ್ಳಲು ನೀವು ಅನುಸರಿಸುವ ಮಾನವೀಯ ಮೌಲ್ಯಗಳ ವಿಧಾನ ಏನು?

ನಾವು ನಮ್ಮ ತೋಟದ ಕಾರ್ಮಿಕರೊಂದಿಗೆ ಮಾನವೀಯ ಮೌಲ್ಯಗಳೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳಬೇಕು, ಅವರ ಕಷ್ಟ ಸುಖಗಳಿಗೆ ಜೊತೆಯಾಗಬೇಕು. ಆಗ ಮಾತ್ರ ಅವರು ನಮ್ಮೊಂದಿಗೆ ಇರುತ್ತಾರೆ. ಉತ್ತಮ ಬಾಂಧವ್ಯದಿಂದ ಅವರು ಮನಃಪೂರ್ವಕವಾಗಿ ಕೆಲಸ ಮಾಡುತ್ತಾರೆ.

ಕೊಡಗಿನ ಕಾಫಿ ಕೃಷಿಯಲ್ಲಿ ಯಾಂತ್ರೀಕರಣ (Mechanization) ಏಕೆ ಸಾಧ್ಯವಾಗುತ್ತಿಲ್ಲ?

ಕೊಡಗಿನ ಪ್ರದೇಶದಲ್ಲಿ ಮೆಕ್ಯಾನೈಸೇಷನ್ ಕಾಫಿ ಕೃಷಿಯಲ್ಲಿ ಆಗುವುದಿಲ್ಲ. ಇಲ್ಲಿನ ಭೂಪ್ರದೇಶಕ್ಕೆ ಯಾವುದೇ ಮಶೀನರಿಯನ್ನು ತರಲು ಸಾಧ್ಯವಿಲ್ಲ. ನಾವು ಎಲ್ಲಾ ಕಾಲದಲ್ಲೂ ಮಾನವ ಶಕ್ತಿಯನ್ನೇ ಅವಲಂಬಿಸಬೇಕಾಗಿದೆ.

ಕಾಫಿ ಬೆಳೆಗಾರರ ಸಮುದಾಯದಲ್ಲಿ ನೀವು ಕಾಣುವ ಅತಿದೊಡ್ಡ ಕೊರತೆ ಏನು?

ಕೊಡಗಿನಲ್ಲಿ ಅಂದಾಜು 45,000 ಕಾಫಿ ಬೆಳೆಗಾರರಿದ್ದರೂ, ಒಂದು ಸೆಮಿನಾರ್ ಮಾಡಿದರೆ ಕೇವಲ 20 ರಿಂದ 30 ಜನ ಮಾತ್ರ ಇರುತ್ತಾರೆ. ಇದು ನಮ್ಮ ಬೆಳೆಗಾರರು ಇನ್ನೂ ಹೊಸತನಕ್ಕೆ ಹೊಂದಿಕೊಂಡಿಲ್ಲ ಎಂಬುದನ್ನು ತೋರಿಸುತ್ತದೆ. ನಮ್ಮ ಕಾಫಿ ಸಮುದಾಯವು ವೈಯಕ್ತಿಕವಾಗಿ ಇರುವುದನ್ನು ಬಿಟ್ಟು, ಕಾಫಿ ಸೊಸೈಟಿ ಮತ್ತು ಸಹಕಾರ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಒಟ್ಟಾಗಿ ಅಭಿವೃದ್ಧಿ ಹೊಂದಲು ಯೋಚಿಸಬೇಕು.

ಕಾಫಿ ಕೃಷಿಯ ಬಗ್ಗೆ ನಿಮ್ಮ ಅಂತಿಮ ಅಭಿಪ್ರಾಯ ಮತ್ತು ಸಲಹೆ ಏನು?

ಕಾಫಿ ಕೃಷಿ ಒಂದು ‘ಸಸ್ಟೇನಬಲ್ ಬಿಸಿನೆಸ್’, ಹೊರತು ಒಂದೇ ಬಾರಿಯಲ್ಲಿ ಶ್ರೀಮಂತರಾಗುವ ಉದ್ಯೋಗವಲ್ಲ. ಸ್ವಾವಲಂಬಿಯಾಗಿ ಜೀವನ ನಡೆಸಬೇಕೆಂದು ಆಸಕ್ತಿ ಇರುವವರು ಮಾತ್ರ ಕೃಷಿಯಲ್ಲಿ ತೊಡಗಿಕೊಳ್ಳಬೇಕು. “ಕಾಫಿ ಗ್ರೋಯಿಂಗ್ ಇಸ್ ಮೈ ಪ್ಯಾಷನ್”. ಇದರಲ್ಲಿ ಪೂರ್ಣ ಇನ್ವಾಲ್ವ್ಮೆಂಟ್ ಇರಬೇಕು, ಸಮಯಕ್ಕೆ ಸರಿಯಾಗಿ ನಿರ್ವಹಣೆ ಮಾಡಬೇಕು, ಎಲ್ಲಿ ಎಷ್ಟು ಖರ್ಚು ಮಾಡಬೇಕು ಎಂಬ ಅರಿವು ಇರಬೇಕು. ಆಗ ಮಾತ್ರ ಕಾಫಿಯಲ್ಲಿ ಒಳ್ಳೆಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.

ನೀವು ಯಾವುದಾದರೂ ಕಾಫಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದೀರಾ?

ಹೌದು, ನಾನು ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ (CPA) ಇದರ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ.

ಸಂದರ್ಶಿತರ ಸಂಪರ್ಕ ವಿವರಗಳು


Silver Dream Estate, Ibnivalavadi Post Boikeri, Madikeri-Kodagu


Mob: 9449755341


Email: silverdreamestate@gmail.com

 

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x