ಶಾಂತಿನಿಕೇತನ ಯುವಕ ಸಂಘ, ಮಡಿಕೇರಿ
Shanthinikethana Youth Club, Madikeri
ಶಾಂತಿನಿಕೇತನ ಯುವಕ ಸಂಘ 47 ನೇ ವರ್ಷದ ಅದ್ಧೂರಿ ಗಣೇಶೋತ್ಸವ
ಸಂಪೂರ್ಣ ಭಕ್ತಿ ಮತ್ತು ಸಂಭ್ರಮದಿಂದ
ದಿನಾಂಕ: 27-08-2025ನೇ ಬುಧವಾರದಿಂದ
12-09-2025ನೇ ಶುಕ್ರವಾರದವರೆಗೆ
ಪ್ರಾಸ್ತಾವಿಕ
ಮಡಿಕೇರಿ ನಗರದ ಮೈಸೂರು ರಸ್ತೆಯ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋದ ಬದಿಯಲ್ಲಿರುವ ಶಾಂತಿನಿಕೇತನ ಬಡಾವಣೆಯಲ್ಲಿ ಕಳೆದ 46 ವರ್ಷಗಳಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವ ಶಾಂತಿನಿಕೇತನ ಯುವಕ ಸಂಘವು ಈ ವರ್ಷ ಮಡಿಕೇರಿ ದಸರಾ ದಶಮಂಟಪಗಳಿಗೆ ಸರಿ ಸಮನಾದ ಮಂಟಪವನ್ನು ಹೊರಡಿಸುವ ಸಿದ್ದತೆಯಲ್ಲಿದೆ. ವರ್ಷದಿಂದ ವರ್ಷಕ್ಕೆ ಭಿನ್ನ-ವಿಭಿನ್ನ ರೀತಿಯಲ್ಲಿ ಗಣೇಶನ ಮತ್ತು ಇತರ ಕಲಾಕೃತಿಗಳನ್ನು ಪ್ರತಿಷ್ಠಾಪಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿರುವ ‘ಶಾಂತಿನಿಕೇತನ ಯುವಕ ಸಂಘ’ವು ಈ ಬಾರಿ ದಸರಾ ದಶಮಂಟಪಗಳಿಗೆ ಸರಿಸಾಟಿಯಾದ ಮಂಟಪವನ್ನು ಇಳಿಸಿ ದಸರಾ ದಶಮಂಟಪಗಳ ಹುಬ್ಬೆರಿಸುವಂತೆ ಮಾಡುವ ತವಕದಲ್ಲಿದೆ.

ಮಂಟಪವನ್ನು ಸಂಘದ ಅಧ್ಯಕ್ಷ ಚೇತನ್‌ರವರ ಮಾರ್ಗದರ್ಶನದಲ್ಲಿ ಕಲಾವಿದರಾಗಿದ್ದ ದಿ.ಅಣ್ಣುರವರ ಪುತ್ರ ಕಲಾವಿದ ರವಿಯವರು ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಕಲಾವಿದ ರವಿಯರ ಕೈಚಳಕದಲ್ಲಿ ಇಲ್ಲಿಯವರೆಗೆ ದಸರಾ, ಗಣೇಶೋತ್ಸವ, ಕಾವೇರಿ ಸಂಕ್ರಮಣದ ಮಂಟಪ, ಮಡಿಕೇರಿ ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಿಸಲಾದ ಬೃಹತ್ ಶಿವಾಲಯ ಮುಂತಾದ ಹತ್ತು ಹಲವು ಕಲಾಕೃತಿಗಳು ನಿರ್ಮಾಣಗೊಂಡಿದೆ. ರವಿಯವರೊಂದಿಗೆ ಸಹ ಕಲಾವಿದರ ತಂಡ ಸತತ 3 ತಿಂಗಳಿಂದ ಶ್ರಮ ವಹಿಸಿ ಕಥಾ ಹಂದರದ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.
ಶಾಂತಿನಿಕೇತನ ಯುವಕ ಸಂಘದ ಕಳೆದ 46 ವರ್ಷಗಳ ಭವ್ಯ ಕಲಾಕೃತಿಯ ಮಂಟಪವು ಜನ-ಮನ ಸೂರೆಗೊಂಡು ಪ್ರಶಂಸೆಗೆ ಪಾತ್ರವಾಗಿದ್ದು, ಒಂದು ರೀತಿಯಲ್ಲಿ ಶಾಂತಿನಿಕೇತನ ಯುವಕ ಸಂಘದ ಗಣೇಶೋತ್ಸವ ಕೂಡಾ ಮಡಿಕೇರಿಯ ದಸರಾ ಜನೋತ್ಸವಕ್ಕೆ ಸರಿಸಾಟಿಯಾಗಿ ನಿಲ್ಲುವುದರತ್ತ ತನ್ನ ಹೆಜ್ಜೆಯನ್ನಿರಿಸುವುದು ಶ್ಲಾಘನೀಯ. ಇದೆಲ್ಲದಕ್ಕೂ ಶಾಂತಿನಿಕೇತನ ಯುವಕ ಸಂಘದ ಅಧ್ಯಕ್ಷರಾದ ಶ್ರಿ ಚೇತನ್ ಮತ್ತು ಬಳಗದ ಪ್ರತಿಯೊಬ್ಬ ಸದಸ್ಯರ ಶ್ರಮವಿದೆ. ಇವರ ಈ ಜನ ಮನೋರಂಜನೆಯ ಗಣೇಶೋತ್ಸವವು ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಭಿನ್ನ ರೀತಿಯಲ್ಲಿ ಮೂಡಿ ಬಂದು ಜನರ ಮನೋರಂಜನೆಗೆ ಸಾಕ್ಷಿಯಾಗಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ.
ಸದ್ಭಕ್ತ ಬಾಂಧವರೇ,
ಸ್ವಸ್ತಿಶ್ರೀ ಶಾಲಿವಾಹನ ಶಕೆ ೧೯೪೭ ನೇ ವಿಶ್ವಾವಸು ನಾಮ ಸಂವತ್ಸರದ ಬಾದ್ರಪದ ಮಾಸ ಶುಕ್ಲ ಪಕ್ಷ ಚತುರ್ಥಿ ದಿನ 27-08-2025 ಬುಧವಾರ ಬೆಳಿಗ್ಗೆ 11-00 ಗಂಟೆಗೆ ಶಾಂತಿನಿಕೇತನ ಬಡಾವಣೆಯಲ್ಲಿ ಶ್ರೀ ಗಣಪತಿ ಹೋಮದೊಂದಿಗೆ ಶ್ರೀ ಮಹಾ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಮಹಾಪೂಜೆ ನಡೆಯಲಿದೆ.
ನಂತರ 17 ದಿನಗಳ ಕಾಲ ಪ್ರತಿ ದಿನ ಸಂಜೆ 8-00 ಗಂಟೆಯಿಂದ ಭಜನೆ ಮತ್ತು ಮಹಾಪೂಜೆ ನಡೆಯಲಿದೆ.
ದಿನಾಂಕ 06-09-2025ನೇ ಶನಿವಾರ ಸಂಜೆ 7-00 ಗಂಟೆಗೆ ಸಾಮೂಹಿಕ ರಂಗಪೂಜೆ ಏರ್ಪಡಿಸಲಾಗಿದೆ.
ದಿನಾಂಕ 12-09-2025ನೇ ಶುಕ್ರವಾರ ದಂದು ಮಹಾ ಪೂಜೆಯ ನಂತರ ಶ್ರೀ ಮಹಾ ಗಣಪತಿ ಮೂರ್ತಿಯನ್ನು ಕಥಾ ಸಾರಾಂಶವುಳ್ಳ ಅಲಂಕೃತ ಮಂಟಪದಲ್ಲಿ ಅದ್ದೂರಿ ಶೋಭಾಯಾತ್ರೆಯೊಂದಿಗೆ ಮಡಿಕೇರಿಯ ಮುಖ್ಯ ಬೀದಿಗಳಲ್ಲಿ ಕೊಂಡೊಯ್ದು, ಗೌರಿ ಕೆರೆಯಲ್ಲಿ ವಿಸರ್ಜಿಸಲಾಗುವುದು.
ಭಗವತ್‌ಭಕ್ತರು ಅಧಿಕ ಸಂಖ್ಯೆಯಲ್ಲಿ ಈ ಎಲ್ಲಾ ದೇವತಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತನು, ಮನ, ಧನ ಸಹಾಯ ನೀಡಿ ಸಹಕರಿಸಿ ಶ್ರೀ ವಿನಾಯಕನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಸರ್ವ ಭಕ್ತಾದಿಗಳಿಗೂ ಆದರದ ಸುಸ್ವಾಗತ
ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ

ಆಡಳಿತ ಮಂಡಳಿ – ಪದಾದಿಕಾರಿಗಳು ಹಾಗು ಸದಸ್ಯರುಗಳು















































































































