ಶ್ರೀ ಕಾವೇರಿ ದಸರಾ ಸಮಿತಿ(ರಿ), ಗೋಣಿಕೊಪ್ಪ
48ನೇ ವಾರ್ಷಿಕ ದಸರಾ ಜನೋತ್ಸವ - 2026
ಗೋಣಿಕೊಪ್ಪಲು ದಸರಾ
Sri Cauvery Dasara Samithi • 1979
ಗೋಣಿಕೊಪ್ಪಲು ದಸರಾ ಪ್ರಾರಂಭದ ಹಿನ್ನೆಲೆ ಹಾಗೂ ನಾಡಹಬ್ಬ ನಡೆದು ಬಂದ ದಾರಿ
ದಕ್ಷಿಣ ಕೊಡಗಿನ ಸಾಂಸ್ಕೃತಿಕ ಕಿರೀಟ, ಸರ್ವಧರ್ಮೀಯರ ಸಾಮರಸ್ಯದ ಸಂಕೇತವಾಗಿರುವ ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ನಾಡಹಬ್ಬದ ಉಗಮ, ಸಾಗಿಬಂದ ರಜತ ಪಥ ಮತ್ತು ಐತಿಹಾಸಿಕ ಮೈಲಿಗಲ್ಲುಗಳು.
ದಿ. ಎಂ.ಜಿ. ಪದ್ಮನಾಭ ಕಾಮತ್
1979 ರಲ್ಲಿ ದಕ್ಷಿಣ ಭಾರತದ ಜೀವನದಿ ಶ್ರೀ ಕಾವೇರಿ ಮಾತೆಯ ಪವಿತ್ರ ಹೆಸರಿನಲ್ಲಿ, ಗೋಣಿಕೊಪ್ಪಲಿನ ಸರ್ವ ಜನರ ಭಾವೈಕ್ಯದ ಸಂಕೇತವಾಗಿ “ಶ್ರೀ ಕಾವೇರಿ ದಸರಾ ಸಮಿತಿ” ಸ್ಥಾಪಿಸಿ ದಸರಾ ನಾಡಹಬ್ಬಕ್ಕೆ ಚಾಲನೆ ನೀಡಿದ ಧೀಮಂತ ನಾಯಕರು.
ಗೋಣಿಕೊಪ್ಪಲು ದಸರಾ ಪ್ರಾರಂಭದ ಹಿನ್ನೆಲೆ (1979)
ದಕ್ಷಿಣ ಭಾರತದ ಜೀವನದಿ ಶ್ರೀ ಕಾವೇರಿ ಮಾತೆಯ ಹೆಸರಿನಲ್ಲಿ ನವರಾತ್ರಿ ಉತ್ಸವದೊಂದಿಗೆ ಸರ್ವ ಜನರ ಭಾವೈಕ್ಯದ ದಸರಾ ನಾಡಹಬ್ಬವನ್ನು 1979 ರಲ್ಲಿ ಗೋಣಿಕೊಪ್ಪಲಿನ ಎಂ.ಜಿ. ಪದ್ಮನಾಭ ಕಾಮತ್ ಮತ್ತು ಕೆಲವು ಸ್ನೇಹಿತರು ಸೇರಿ “ಶ್ರೀ ಕಾವೇರಿ ದಸರಾ ಸಮಿತಿ” ಎಂಬ ಹೆಸರಿನಲ್ಲಿ ಗೋಣಿಕೊಪ್ಪಲಿನಲ್ಲಿ ದಸರಾ ನಾಡಹಬ್ಬವನ್ನು ಪ್ರಾರಂಭಿಸಿದರು.
ಗೋಣಿಕೊಪ್ಪಲಿನ ಪುರಸಭೆಯ ಸಭಾಂಗಣದಲ್ಲಿ ಶ್ರೀ ಶಾರದಾಂಬೆಯ ಪ್ರತಿಷ್ಠಾಪನೆಯೊಂದಿಗೆ ಮೊದಲ ವರ್ಷದ ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. 7 ದಿನಗಳ ಕಾಲ ಭಾಗಮಂಡಲದ ಎದುರ್ಕಳ ಶಂಕರನಾರಾಯಣ ಭಟ್ಟರಿಂದ ಗೀತಾಯಜ್ಞ, ಒಂದು ದಿನ ಹರಿಕಥೆ ಮತ್ತು ಒಂದು ದಿನ ಗೋಣಿಕೊಪ್ಪಲು ಕಲಾವೃಂದದವರಿಂದ ಆಕರ್ಷಕ ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಾಂಸ್ಕೃತಿಕ ಲೋಕಕ್ಕೆ ಮುನ್ನುಡಿ ಬರೆದರು. ನಂತರದ 4 ವರ್ಷಗಳವರೆಗೆ (1979 ರಿಂದ 1982 ರವರೆಗೆ) ಇದೇ ಸಮಿತಿಯು ಉತ್ಸವವನ್ನು ಮುನ್ನಡೆಸಿಕೊಂಡು ಬಂದಿತು.
1979 ರ ಪ್ರಥಮ ಸಮಿತಿಯ ಸ್ಥಾಪಕ ಪದಾಧಿಕಾರಿಗಳು ಹಾಗೂ ನೇತಾರರು:
ಗೋಣಿಕೊಪ್ಪಲು ದಸರಾ ನಾಡಹಬ್ಬ ನಡೆದು ಬಂದ ದಾರಿ
ಚೆಪ್ಪುಡಿರ ಪ್ರೇಮ್ ಗಣಪತಿಯವರ ಸಾರಥ್ಯ
5ನೇ ವರ್ಷದಲ್ಲಿ ಚೆಪ್ಪುಡಿರ ಪ್ರೇಮ್ ಗಣಪತಿಯವರು ಜವಾಬ್ದಾರಿ ವಹಿಸಿಕೊಂಡು 9ನೇ ವರ್ಷದವರೆಗೆ (1983 ರಿಂದ 1987) ಉತ್ಸವವನ್ನು ಯಶಸ್ವಿಯಾಗಿ, ಶಿಸ್ತುಬದ್ಧವಾಗಿ ಮುನ್ನಡೆಸಿದರು.
ಪೊನ್ನಿಮಾಡ ಕೆ. ಬೋಜಪ್ಪರವರ ಅಧ್ಯಕ್ಷತೆ & ಸಿ.ಎ. ಮೊಹಮ್ಮದ್ ರಫಿ
10ನೇ ವರ್ಷದಲ್ಲಿ ಪೊನ್ನಿಮಾಡ ಕೆ. ಬೋಜಪ್ಪರವರು ಅಧ್ಯಕ್ಷರಾಗಿದ್ದರು. ಅದೇ ವರ್ಷ ಗೋಣಿಕೊಪ್ಪಲಿನಲ್ಲಿ ಮೊದಲ ಸ್ಥಬ್ದಚಿತ್ರ ಮೆರವಣಿಗೆ ಮತ್ತು ಜಂಬೂ ಸವಾರಿ ಅಂದಿನ ನಿರ್ದೇಶಕರಾಗಿದ್ದ ಸಿ.ಎ. ಮೊಹಮ್ಮದ್ ರಫಿಯವರ ನೇತೃತ್ವದಲ್ಲಿ ಪ್ರಾರಂಭವಾಗಿ ಜನಮನ್ನಣೆ ಗಳಿಸಿತು.
ಬಿ.ಡಿ. ಮುಕುಂದರವರ ನೇತೃತ್ವ
11ನೇ ವರ್ಷದಲ್ಲಿ ಅಂದಿನ ಪುರಸಭಾಧ್ಯಕ್ಷರಾಗಿದ್ದ ಬಿ.ಡಿ. ಮುಕುಂದರವರ ನೇತೃತ್ವದಲ್ಲಿ ದಸರಾ ನಡೆದು, 12ನೇ ವರ್ಷದವರೆಗೆ ಸಮಿತಿಯು ಜನಪ್ರಿಯ ಉತ್ಸವವಾಗಿ ಮುಂದುವರೆಯಿತು.
ಮನೆಯಪಂಡ ಜಿ. ಅಚ್ಚಪ್ಪ ಮತ್ತು ಎಂ.ಕೆ. ನಂಜಪ್ಪರವರ 12 ವರ್ಷಗಳ ಯುಗ
13ನೇ ವರ್ಷದಲ್ಲಿ ಮನೆಯಪಂಡ ಜಿ. ಅಚ್ಚಪ್ಪರವರು ಅಧ್ಯಕ್ಷರಾಗಿ ಮುನ್ನಡೆಸಿದರು. 14ನೇ ವರ್ಷದಲ್ಲಿ (1992) ಶ್ರೀಯುತ ಎಂ.ಕೆ. ನಂಜಪ್ಪನವರು ಅಧ್ಯಕ್ಷರಾಗಿ ಸುದೀರ್ಘ 12 ವರ್ಷಗಳ ಕಾಲ (1992 ರಿಂದ 2003) ದಸರಾ ನಾಡಹಬ್ಬವನ್ನು ದಕ್ಷಿಣ ಕೊಡಗಿನ ಹೆಮ್ಮೆಯ ಉತ್ಸವವನ್ನಾಗಿಸಿದರು.
📜 1996-97: ಶ್ರೀ ಎಂ.ಕೆ. ನಂಜಪ್ಪನವರ ಅಧ್ಯಕ್ಷತೆಯಲ್ಲಿ “ಶ್ರೀ ಕಾವೇರಿ ದಸರಾ ಸಮಿತಿ”ಯನ್ನು ಸೊಸೈಟಿಗಳ ನೋಂದಣಿ ಕಾಯ್ದೆಯಡಿ ಅಧಿಕೃತವಾಗಿ ನೋಂದಾಯಿಸಲಾಯಿತು.
🏆 2003: ಭವ್ಯವಾದ ಬೆಳ್ಳಿಹಬ್ಬ (Silver Jubilee) ಮಹೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.
ಬೃಹತ್ ರಂಗಮಂದಿರ & ಪೇಜಾವರ ಶ್ರೀಗಳ ಉದ್ಘಾಟನೆ
ರಜತ ಮಹೋತ್ಸವದ ಕಾರ್ಯಕ್ರಮಗಳನ್ನು ನಡೆಸಲು ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮೂಡಬಿದರೆಯ ಡಾ. ಮೋಹನ್ ಆಳ್ವ ಮತ್ತು ಆರ್.ಕೆ. ಭಟ್ರವರಿಂದ ಬೃಹತ್ ರಂಗಮಂದಿರವನ್ನು ನಿರ್ಮಿಸಲಾಯಿತು. ಇದನ್ನು ಪೇಜಾವರ ಅಧೋಕ್ಷಜ ಮಠದ ಪೀಠಾಧೀಶರಾದ ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಸಮಿತಿಗಳ ಅಧ್ಯಕ್ಷರು ಹಾಗೂ ಸ್ಥಾಪಕ ಅಧ್ಯಕ್ಷರ ಪತ್ನಿ ಶ್ರೀಮತಿ ಮೀರಾ ಕಾಮತ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕುಲ್ಲಚಂಡ ಪ್ರಮೋದ್ ಗಣಪತಿಯವರ ಅಧ್ಯಕ್ಷತೆ
ಕುಲ್ಲಚಂಡ ಪ್ರಮೋದ್ ಗಣಪತಿಯವರ ಅಧ್ಯಕ್ಷತೆಯಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ಗೋಣಿಕೊಪ್ಪಲು ನಾಡಹಬ್ಬ ದಸರಾ ಉತ್ಸವವು 2017 ರಲ್ಲಿ 39ನೇ ವರ್ಷದ ಅದ್ಧೂರಿ ಆಚರಣೆಯನ್ನು ಕಂಡಿತು.
“ದಸರಾ ಹಬ್ಬ ನಾಡಹಬ್ಬ
ಭೇದಭಾವ ಮರೆವ ಹಬ್ಬ
ಸ್ನೇಹ ಪ್ರೀತಿ ಮೆರವ ಹಬ್ಬ
ದಸರಾ ಹಬ್ಬ ನಾಡಹಬ್ಬ”
1989 ರಲ್ಲಿ ಗೋಣಿಕೊಪ್ಪಲಿನ ಮೊದಲನೇ ವಿಭಾಗದ ಸ್ನೇಹಿತರು ಬಿ.ಎ. ಗಣಪತಿಯವರ ನೇತೃತ್ವದಲ್ಲಿ “ದಸರಾ ನಾಡಹಬ್ಬ ಸಮಿತಿ”ಯನ್ನು ಸ್ಥಾಪಿಸಿದರು. ಎಸ್.ವಿ. ನಾರಾಯಣ್, ಎಂ.ಜೆ. ಮೈಕಲ್, ಕೆ.ಬಿ. ವೇಣು, ಎಂ.ಪಿ. ಕೇಶವ ಕಾಮತ್, ಪ್ರಭಾಕರ ನೆಲ್ಲಿತ್ತಾಯ, ಸಿ.ಪಿ. ಮುತ್ತಪ್ಪ, ಇಲಿಯಾಸ್, ಇಬ್ರಾಹಿಂ, ಬೇಬಿ ಮೊದಲಾದ ಸರ್ವಧರ್ಮೀಯ ಒಡನಾಡಿಗಳು ಜತೆಯಾಗಿ ಹಾಕಿದ ಈ ಹೆಜ್ಜೆಯು ಮುಂದಿನ ದಿನಗಳಲ್ಲಿ ಒಟ್ಟು 9 ಸಹಯೋಗಿ ಸಮಿತಿಗಳು ಹುಟ್ಟಿಕೊಳ್ಳಲು ಕಾರಣವಾಗಿ, ಹಬ್ಬವನ್ನು ನಿಜವಾದ ಅರ್ಥದಲ್ಲಿ ನಾಡಹಬ್ಬವಾಗಿಸಿತು.
ಉತ್ಸವ ಸ್ಥಳಗಳ ಬದಲಾವಣೆ
- 1. ಪುರಸಭಾ ಸಭಾಂಗಣ: 1979 ರಲ್ಲಿ ಶ್ರೀ ಶಾರದಾಂಬೆ ಸ್ಥಾಪನೆಯೊಂದಿಗೆ ಪ್ರಥಮ ವರ್ಷದ ಆರಂಭ.
- 2. ಶ್ರೀ ಉಮಾಮಹೇಶ್ವರಿ ದೇವಾಲಯದ ಅಂಗಳ: ಭಕ್ತರ ಆಗಮನ ಹೆಚ್ಚಿದಂತೆ ದೇವಾಲಯದ ಆವರಣಕ್ಕೆ ಸ್ಥಳಾಂತರ.
- 3. ಬಸ್ ನಿಲ್ದಾಣ: ಜನಸಾಗರಕ್ಕೆ ತಕ್ಕಂತೆ ಬಸ್ ನಿಲ್ದಾಣದಲ್ಲಿ ಉತ್ಸವ.
- 4. ಸರಕಾರಿ ಪ್ರಾಥಮಿಕ ಶಾಲಾ ಮೈದಾನ: ಇದೀಗ ಹಲವು ವರ್ಷಗಳಿಂದ ಬೃಹತ್ ಮಂಟಪ ಹಾಗೂ ರಂಗಮಂದಿರದೊಂದಿಗೆ ಇಲ್ಲಿಯೇ ವೈಭವದ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ.
ವಿಗ್ರಹ ದಾನ & ಕ್ರೀಡಾ ಸಾಹಸ
ಶ್ರೀ ಚಾಮುಂಡೇಶ್ವರಿಯ ವಿಗ್ರಹ: ಬೃಹತ್ ಮಂಟಪದಲ್ಲಿ ಪ್ರತಿಷ್ಠಾಪಿಸುವ ತಾಯಿ ಚಾಮುಂಡೇಶ್ವರಿಯ ಪವಿತ್ರ ವಿಗ್ರಹವನ್ನು ಹಲವು ವರ್ಷಗಳಿಂದ ಶ್ರೀ ಎಂ.ಜಿ. ಲಕ್ಷ್ಮಣ ಕಾಮತ್ರವರು ದಾನವಾಗಿ ನೀಡುತ್ತಿದ್ದರು. ಪ್ರಸ್ತುತ ಸಂಸ್ಥಾಪಕ ಅಧ್ಯಕ್ಷರ ಪುತ್ರರಾದ ಕೇಶವ ಕಾಮತ್ ಮತ್ತು ಪ್ರಮೋದ್ ಕಾಮತ್ ಈ ಪುಣ್ಯ ಕೈಂಕರ್ಯವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.
🏍️ ಮೊದಲ ಮೋಟೋಕ್ರಾಸ್ ಸ್ಪರ್ಧೆ: ಸಾಂಸ್ಕೃತಿಕ ಮಾತ್ರವಲ್ಲದೆ ಕ್ರೀಡಾ ಜಗತ್ತಿನಲ್ಲೂ ಮುಂಚೂಣಿಯಲ್ಲಿದ್ದು, ಗೋಣಿಕೊಪ್ಪಲಿನಲ್ಲಿ ಮೊಟ್ಟಮೊದಲ ಮೋಟೋಕ್ರಾಸ್ (Motocross) ಸ್ಪರ್ಧೆಯನ್ನು ಏರ್ಪಡಿಸಿದ ಹೆಗ್ಗಳಿಕೆ ಶ್ರೀ ಕಾವೇರಿ ದಸರಾ ಸಮಿತಿಗೆ ಸಲ್ಲುತ್ತದೆ.
ಗೋಣಿಕೊಪ್ಪಲು ದಸರಾ ಏಳಿಗೆಗಾಗಿ ದುಡಿದ ಊರಿನ ಪ್ರಮುಖ ಗಣ್ಯರು
ಶ್ರೀ ಕಾವೇರಿ ದಸರಾ ಸಮಿತಿಯ ಯಶಸ್ಸಿನ ಹಿಂದೆ ನಿಷ್ಠೆಯಿಂದ ದುಡಿದ ಊರಿನ ಹಿರಿಯರು ಮತ್ತು ಸಮಾಜ ಸೇವಕರು: