ಆಯುಧ ಪೂಜೆಯ ಸಂಭ್ರಮಾಚರಣೆಗೆ ಮೂರ್ನಾಡು ಪಟ್ಟಣದಲ್ಲಿ ಸಿದ್ದತೆ
ಮೂರ್ನಾಡು: ಇಲ್ಲಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಮೂರ್ನಾಡುವಿನಲ್ಲಿ ಅದ್ಧೂರಿ ಆಯುಧ ಪೂಜಾ ಮಹೋತ್ಸವ ದಿನಾಂಕ 1ರಂದು ನಡೆಯಲಿದೆ. ಇಲ್ಲಿನ ಮೂರ್ನಾಡು ಪ್ರೌಢಶಾಲೆಯ ಮೈದಾನ ಹಾಗೂ ನಾಡ್‌ಮಂದ್‌ನಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ಅಲಂಕೃತ ವೇದಿಕೆಯಲ್ಲಿ 32ನೇ ವರ್ಷದ ಆಯುಧ ಪೂಜೆಯ ಸಂಭ್ರಮಾಚರಣೆಗೆ ಮೂರ್ನಾಡು ಪಟ್ಟಣ ಅಣಿಯಾಗುತ್ತಿದೆ. ಮೂರ್ನಾಡು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘವು ಆಯೋಜಿಸುತ್ತಿರುವ ವಿಜೃಂಭಣೆಯ ಆಯುಧ ಪೂಜಾ ಕಾರ್ಯಕ್ರಮವು ಅಪರಾಹ್ನ 2.00 ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆಯೊಂದಿಗೆ ಪ್ರಾರಂಭಗೊಂಡು, ನಂತರ ಮುಖ್ಯ ರಸ್ತೆಯಲ್ಲಿ ಅಲಂಕೃತ ವಾಹನಗಳ ಮೆರವಣಿಗೆ ನಡೆಯಲಿದೆ. ಮೆರವಣಿಗೆ ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಸೇರಿರುತ್ತಾರೆ. ಮೆರವಣಿಗೆಯಲ್ಲಿ ಅಲಂಕೃತ ವಾಹನಗಳೊಂದಿಗೆ ಈ ಬಾರಿ ವಿಶೇಷವಾಗಿ ಕ್ಯಾಲಿಕಟ್‌ನ ಹರಿಶ್ರೀ ಕಲಾ ಸಮಿತಿಯ ಬೊಂಬೆ ಕುಣಿತ ಮತ್ತು ವಾದ್ಯಗೋಷ್ಟಿ ಮೆರವಣಿಗೆಯ ಕಳೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
ಸಂಜೆಯ ವೇಳೆಗೆ ವಿನೋದ್ ಕರ್ಕೆರ ಅವರ ಮೈಸೂರಿನ ಸಿಗ್ನೇಚರ್ ಡ್ಯಾನ್ಸ್ ಕಂಪನಿಯ ಡಿಕೆಡಿ ವಿಜೇತ ರಾಹುಲ್ ರಾವ್ ಮತ್ತು ಸಂಗಡಿಗರ ನೃತ್ಯ ಕಾರ್ಯಕ್ರಮ ಹಾಗೆಯ ಮೂರ್ನಾಡಿನ ಜಲಜ ನಾಗರಾಜ್‌ರವರ ಭಾರತೀಯ ನೃತ್ಯ ಕಲಾ ಶಾಲೆಯ ಕಲಾವಿದರಿಂದ ನೃತ್ಯ ಕಾರ್ಯಕ್ರಮ ಹಾಗೂ ಮೂರ್ನಾಡಿನ ಚರಣ್‌ರವರ ಸ್ಟೆಪ್‌ಅಪ್ ಗ್ರೂಪ್‌ನ ಕಲಾವಿದರಿಂದ ನೃತ್ಯ ಕಾರ್ಯಕ್ರಮಗಳು ಜರುಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಮೊದಲು ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಕರವಂಡ ಕೆ. ಸಜನ್ ಗಣಪತಿ ವಹಿಸಲಿದ್ದು, ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಕುಶನ್ ರೈ, ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್, ಮೂರ್ನಾಡು ಕಂದಾಯ ಇಲಾಖೆಯ ಗ್ರಾಮಾಡಳಿತಾಧಿಕಾರಿ ಅಕ್ಷತ ಬಿ. ಶೆಟ್ಟಿ, ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ವಿರಾಜಪೇಟೆಯ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಮತ್ತು ವಕೀಲರಾದ ಬಿ.ಎ. ಕೃಷ್ಣಮೂರ್ತಿ, ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ.ಎಸ್. ರೇಖಾ ಬಾಲು, ಮೂರ್ನಾಡು ಪ್ರೌಢಶಾಲೆಯ ಮುಖ್ಯಶಿಕ್ಷಕಿ ಎಸ್.ಎಂ. ದೇಚಮ್ಮ, ಮೂರ್ನಾಡು ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಬಿ.ಎಸ್. ಪುಷ್ಪಾವತಿ, ಬೆಂಗಳೂರಿನ ಸಿಗ್ಮಾ ನೆಟ್‌ವರ್ಕ್ನ ಮಾಲೀಕ ಅವರೆಮಾದಂಡ ಶರಣ್ ಪೂಣಚ್ಚ, ತ್ರಿನೇತ್ರ ಸಂಘದ ಗೌರವಾಧ್ಯಕ್ಷ ಎನ್.ಕೆ. ಕುಂಞÂರಾಮ, ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಚೌರೀರ ಜಗತ್ ತಿಮ್ಮಯ್ಯ, ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ, ಮೂರ್ನಾಡು ಮಾರುತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಂಡAಡ ಅಪ್ಪಚ್ಚು, ಮುಸ್ಲಿಂ ಜಮಾಅತ್‌ನ ಅಧ್ಯಕ್ಷ ಕೆ.ಎ. ಅಬ್ದುಲ್ ಮಜೀದ್ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿಯ ಸಂಜೀವಿನಿ ಘನ ತ್ಯಾಜ್ಯ ವಿಂಗಡಣಾ ಘಟಕದ ಮಹಿಳಾ ಸಿಬ್ಬಂದಿಗಳು ಮತ್ತು ಕಳೆದ ಸಾಲಿನಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಳಿಗೆ ಸಂಘದ ವತಿಯಿಂದ ಸನ್ಮಾನಿಸಲಾಗುವುದು. ಅಲಂಕೃತಗೊಂಡ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ, ಆರು ಚಕ್ರ ವಾಹನಗಳು ಮತ್ತು ಅಂಗಡಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ಸಾರ್ವಜನಿಕರಿಗೆ ರಾತ್ರಿ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಸಂಘದ ವತಿಯಿಂದ ಮಾಡಲಾಗಿದೆ. ಸಂಘದ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರು ವ್ಯವಸ್ಥಿತವಾಗಿ ಆಯುಧಪೂಜೆ ಸಮಾರಂಭವು ನಡೆಯಲು ಶ್ರಮವಹಿಸುತ್ತಿದ್ದಾರೆ.
ವರದಿ: ಟಿ.ಸಿ.ನಾಗರಾಜ್, ಮೂರ್ನಾಡು.

