ಮೂರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಎನ್‍ಎಸ್‍ಎಸ್ ವಿಶೇಷ ವಾರ್ಷಿಕ ಶಿಬಿರ
ಮೂರ್ನಾಡು: ಮೂರ್ನಾಡು ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದಂ ಮುತ್ತಾರ್ಮುಡಿ ಗ್ರಾಮದಲ್ಲಿ ಆಯೋಜಿಸಲಾಗಿರುವ ಎನ್‍ಎಸ್‍ಎಸ್ ಶಿಬಿರದಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಮೂರ್ನಾಡು ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ಕಂಬಿರಂಡ ಬೋಪಣ್ಣ ನಶಾ ಮುಕ್ತ ಭಾರತ ಎಂಬ ವಿಷಯದ ಕುರಿತು ಮಾತನಾಡಿ, ಮಾದಕ ವಸ್ತುಗಳು ಮನುಷ್ಯನ ದೇಹ ಮತ್ತು ಮನಸ್ಸುಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಆರೋಗ್ಯಕರ ಸಮಾಜ ಮತ್ತು ಬಲಿಷ್ಠ ಭಾರತ ನಿರ್ಮಾಣದ ನಿಟ್ಟಿನಲ್ಲಿ ಯುವ ಜನತೆ ಮಾದಕ ವಸ್ತುಗಳಿಂದ ದೂರವಿರಬೇಕು. ಆರೋಗ್ಯಕರ ಜೀವನ ನಡೆಸಲು ಮಾದಕ ವಸ್ತುಗಳ ಬಗ್ಗೆ ನಿರಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆಮ್ಮಡಿಯಂಡ ವೇಣುಅಪ್ಪಣ್ಣ ಮಾತನಾಡಿ, ಮಾದಕ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಮತ್ತೋರ್ವ ಅತಿಥಿ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್‍ರೈ ಮಾತನಾಡಿ ಎನ್‍ಎನ್‍ಎಸ್ ಶಿಬಿರವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂರ್ನಾಡು ವಿದ್ಯಾಸಂಸ್ಥೆಯ ನಿರ್ದೇಶಕ ಪುದಿಯೊಕ್ಕಡ ಹರೀಶ್‍ದೇವಯ್ಯ, ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರಲ್ಲೂ ವಿಶೇಷವಾದ ಪ್ರತಿಭೆಗಳಿದ್ದು, ಇಂತಹ ಶಿಬಿರಗಳ ವೇದಿಕೆಯಲ್ಲಿ ಹೊರಹೊಮ್ಮುವಂತಾಗಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮೀನಾಕ್ಷಿ ದೇವಯ್ಯ, ಎಂ.ಎನ್.ಪುಷ್ಪ, ಸೌಮ್ಯ ಸತೀಶ್, ವಿಜಯಲಕ್ಷ್ಮಿ, ಪುಷ್ಪಲತಾ, ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಪಿ.ಎಂ.ದೇವಕ್ಕಿ ಹಾಗೂ ಎನ್‍ಎನ್‍ಎಸ್ ಘಟಕದ ಕಾರ್ಯಕ್ರಮಾಧಿಕಾರಿ ದಮಯಂತಿ ಉಪಸ್ಥಿತರಿದ್ದರು.
ವರದಿ: ಟಿ.ಸಿ. ನಾಗರಾಜ್, ಮೂರ್ನಾಡು

